

ಬೆಂಗಳೂರು/ ತುಮಕೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾದಿಂದ ಕಣಕ್ಕಿಳಿಯಲು ಕೈ ಹೈ ಕಮಾಂಡ್ ಒಪ್ಪಿಗೆ ನೀಡಿದ್ದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದ ಹನುಮಂತರಾಯಪ್ಪ ಅವರ ಪುತ್ರಿ ಎಚ್.ಕುಸುಮಾ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಪಟ್ಟಿ ಬಿಡುಗಡೆಗಾಗಿ ಕಾಯ್ದಿದ್ದ ಪಕ್ಷ ಕೊನೆಗೂ ಬುಧವಾರ ತನ್ನ ನಿರ್ಧಾರ ಪ್ರಕಟಿಸಿತು. ಕಳೆದ ಭಾನುವಾರ ಪಕ್ಷದ ಮುಖಂಡರು ಸಮಾಲೋಚನೆ ನಡೆಸಿ ಈ ಇಬ್ಬರ ಹೆಸರನ್ನು ದೆಹಲಿಗೆ ಶಿಾರಸು ಮಾಡಿದ್ದರು. ರಾಜ್ಯ ಘಟಕದ ಶಿಾರನ್ನು ಒಪ್ಪಿರುವ ಹೈಕಮಾಂಡ್, ಎರಡೂ ಕ್ಷೇತ್ರ ಗೆಲ್ಲಲೇಬೇಕು ಎಂದು ಗುರಿ ನೀಡಿದೆ.
ಆಯ್ಕೆ ಹಿಂದಿನ ಲೆಕ್ಕಾಚಾರ?: ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದ ಹಳೆ ಹುಲಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ ಅವರು ಅನೇಕಾನೇಕ ಯೋಜನೆಗಳನ್ನು ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ, ಆಡಳಿತ ವಿರೋಧಿ ಅಲೆಯ ಕಾರಣದಿಂದ ಸಣ್ಣ ಅಂತರದಿಂದ ಸೋಲಬೇಕಾಯಿತು. ಆದರೆ, ಈ ಬಾರಿ ಕಳೆದ ಬಾರಿಯ ಸೋಲಿನ ಅನುಕಂಪವನ್ನು ಟಿಬಿಜೆ ಗಿಟ್ಟಿಸಿಕೊಳ್ಳಬಹುದೆಂಬ ಅಭಿಪ್ರಾಯ ಪಕ್ಷದಲ್ಲಿದೆ. ಜತೆಗೆ 2018ರ ಚುನಾವಣೆಯಲ್ಲಿ ಸೋತರೂ ಜಯಚಂದ್ರ ಕ್ಷೇತ್ರದ ನಿರಂತರ ಸಂಪರ್ಕದಲ್ಲಿದ್ದರು. ಜತೆಗೆ ಅಲ್ಲಿ ಬಿಜೆಪಿ ಪ್ರಬಲವಾಗಿಲ್ಲದ ಕಾರಣ ಮತಗಳನ್ನು ತಾವು ಗಟ್ಟಿಮಾಡಿಕೊಂಡರೆ ಗೆಲುವು ಸಲೀಸು ಎಂದುಕೊಂಡಿದ್ದಾರೆ.
ರಾಜರಾಜೇಶ್ವರಿ ನಗರ ವಿಚಾರಕ್ಕೆ ಬಂದರೆ ಅಕಾಲಿಕವಾಗಿ ನಿಧನರಾದ ಐಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸುವ ಹಿಂದೆ ಕಾಂಗ್ರೆಸ್‌ನ ಬಗೆಬಗೆಯ ಲೆಕ್ಕಾಚಾರ ಅಡಗಿದೆ. ಯುವ ಮತದಾರರನ್ನು ಸೆಳೆಯುವಲ್ಲಿ ಸ್ನಾತಕೋತ್ತರ ಪದವೀಧರೆ ಕುಸುಮಾ ತಕ್ಕಮಟ್ಟಿಗೆ ಸಲರಾದರೆ ಪಕ್ಷದ ಮತಗಳಿಕೆ ಹೆಚ್ಚಾಗಲಿದೆ. ಜತೆಗೆ ಒಕ್ಕಲಿಗ ಮತ ಕ್ರೋಡೀಕರಿಸಬಹುದು, ಹನುಮಂತರಾಯಪ್ಪ ಅವರಿಂದಲೂ ಲಾಭವಾಗಬಹುದು ಎಂಬ ಆಶಯ ಕಾಂಗ್ರೆಸ್‌ನದ್ದು. ಸದ್ಯದ ಪರಿಸ್ಥಿತಿಯಲ್ಲಿ ಮುನಿರತ್ನ ಸೋಲಿಸಲು ಕುಸುಮಾ ಸಮರ್ಥ ಅಭ್ಯರ್ಥಿ ಎಂದು ಡಿಕೆಶಿ ಭಾವಿಸಿದಂತಿದೆ.
ನಾಯಕರ ಪ್ರಚಾರ ಶುರು:ಶಿರಾ ಟಿಕೆಟ್ ಆಕಾಂಕ್ಷಿಯಾಗಿದ್ದ ಮಧುಗಿರಿ ಕೆ.ಎನ್.ರಾಜಣ್ಣ ಅವರನ್ನು ಪಕ್ಷದ ಕಚೇರಿಗೆ ಕರೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ಟಿ.ಬಿ.ಜಯಚಂದ್ರ ಪರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಲ್ಲದೇ ಪ್ರಚಾರಕ್ಕೂ ಸೂಚಿಸಿದ್ದರು. ಕಳೆದ ಹದಿನೈದು ದಿನದಿಂದಲೇ ಜಯಚಂದ್ರ ಹಳ್ಳಿಹಳ್ಳಿ ಸುತ್ತಾಡುತ್ತಿದ್ದಾರೆ. ಎಚ್.ಕುಸುಮಾ ಕೂಡ ಸದ್ದಿಲ್ಲದೆ ಪ್ರಚಾರ ಆರಂಭಿಸಿದ್ದಾರೆ. ಅನೌಪಚಾರಿಕವಾಗಿ ಗುಂಪು ಸಭೆ ನಡೆಸಿದ್ದು, ತಮ್ಮ ಸಂಪರ್ಕದಲ್ಲಿರುವವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಚುರುಕು ನೀಡಿದ್ದಾರೆ.
ರಾಜೇಶ್‌ಗೌಡ ಹಾದಿ ಸುಗಮ: ಶಿರಾ ಬೈಎಲೆಕ್ಷನ್‌ಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಬಿಜೆಪಿ ತೆರೆ ಎಳೆದಿದೆ. ಡಾ.ಸಿ.ಎಂ.ರಾಜೇಶ್‌ಗೌಡ ಹಾದಿ ಬಹುತೇಕ ಸುಗಮಗೊಂಡಿದೆ. ಕುಂಚಿಟಿಗರ ಸಾಮ್ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕುಂಚಿಟಿಗರಿಗೆ ಮಣೆ ಹಾಕಿದ್ದು ಬಿಜೆಪಿ ಸಹ ಅದೇ ಹಾದಿಯಲ್ಲಿ ಸಾಗಿದೆ. ಹಾಗಾಗಿ, ಉಪಸಮರದಲ್ಲಿ ಸಹಜವಾಗಿ ಇತರ ಸಮುದಾಯದವರ ಆಕ್ರೋಶಕ್ಕೆ ಮೂರೂ ಪಕ್ಷಗಳು ಗುರಿಯಾಗುವ ಸಾಧ್ಯತೆ ಇದೆ.
ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್‌ಗೌಡ ಬಿಜೆಪಿ ಸೇರ್ಪಡೆಗೊಂಡ ಬಳಿಕ ಟಿಕೆಟ್
ಆಕಾಂಕ್ಷಿಗಳಲ್ಲಿ ಮಂಚೂಣಿಯಲ್ಲಿದ್ದ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಬೈಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಕನಸು ನುಚ್ಚುನೂರಾಗಿತ್ತು. ಹಾಗಾಗಿ, ಕೆಲವು ಕಡೆ ಎಸ್.ಆರ್.ಗೌಡ ಹಾಗೂ ಮಂಜುನಾಥ್ ತಮ್ಮಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುವುದಾಗಿ ವರಿಷ್ಠರ ಮೇಲೆ ಒತ್ತಡ ಹೇರಲಾರಂಭಿಸಿದ್ದರು. ಜತೆಗೆ ಪ್ರತಿಭಟನೆ ಕೂಡ ಮಾಡಿಸಿ ಬಲಪ್ರದರ್ಶನಕ್ಕೆ ಮುಂದಾಗಿದ್ದರು.
ಗೊಂದಲ ಶಮನ: ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷದೊಳಗೆ ಎದ್ದಿದ್ದ ಗೊಂದಲ ಹಿನ್ನೆಲೆಯಲ್ಲಿ ರಾಜೇಶ್‌ಗೌಡ ಜತೆ ಎಸ್.ಆರ್.ಗೌಡ, ಮಂಜುನಾಥ್ ಹೆಸರನ್ನು ರಾಜ್ಯ ಕೋರ್ ಕಮಿಟಿಯು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಂಧಾನ ಯಶಸ್ವಿಯಾಗಿದೆ. ಆಕಾಂಕ್ಷಿಗಳಿಬ್ಬರನ್ನು ಮನವೊಲಿಸಿ ರಾಜೇಶ್‌ಗೌಡ ಹಾದಿ ಸುಗಮಗೊಳಿಸಿದ್ದು ಪಕ್ಷದಲ್ಲಿ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮೂವರು ಕುಂಚಿಟಿಗರು: ಶಿರಾ ಕ್ಷೇತ್ರವೂ ಕುಂಚಿಟಿಗ ಸಾಮ್ರಾಜ್ಯವೆನಿಸಿದ್ದು ಜೆಡಿಎಸ್‌ನಿಂದ ಅಮ್ಮಾಜಮ್ಮ, ಕಾಂಗ್ರೆಸ್ ಟಿ.ಬಿ.ಜಯಚಂದ್ರ ಹೆಸರನ್ನು ಅಂತಿಮಗೊಳಿಸಿದೆ. ಅವರಿಬ್ಬರೂ ಕುಂಚಿಟಿಗ ಸಮುದಾಯದವರು. ಇನ್ನು ಬಿಜೆಪಿಯಲ್ಲಿ ರಾಜೇಶ್‌ಗೌಡ ಹೆಸರು ಬಹುತೇಕ ಅಂತಿಮಗೊಂಡಿದ್ದು ಮೂರೂ ಪಕ್ಷಗಳ ಅಭ್ಯರ್ಥಿಗಳು ಕುಂಚಿಟಿಗ ಸಮುದಾಯದವರು.
ಕುಂಚಿಟಿಗ ಸಮುದಾಯದಲ್ಲಿ 48 ಬೆಡಗು ಇದ್ದು ಅಮ್ಮಾಜಮ್ಮ ಅಲ್ಪೆನವರು ಬೆಡಗು. ಜಯಚಂದ್ರ ಅವರದ್ದು ಕೋಡಿಹಳ್ಳಿ ಜಾನಕಲ್ ಬೆಡಗು. ರಾಜೇಶ್‌ಗೌಡರದ್ದು ಬೆಳ್ಳೆನವರು ಬೆಡಗು. ಅಲ್ಪೆನವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಉಪಸಮರದಲ್ಲಿ ‘ಬೆಡಗು’ಗಳು ಹೆಚ್ಚು ಸದ್ದು ಮಾಡಲಿವೆ.