ಭೂತದ ಬಾಯಲ್ಲಿ ಭಗವದ್ಗೀತೆ ; ಮಾಧುಸ್ವಾಮಿಗೆ ಟಾಂಗ್ ನೀಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ

12 SIRA 003
Published on

ಶಿರಾ : ತಾಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ ತುಂಬಿರುವ ಕೆರೆ, ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು ಹಲವಾರು ಚೆಕ್ ಡ್ಯಾಂಗಳನ್ನು ಮಂಗಳವಾರ ಮಾಜಿ ಸಚಿವ ಟಿ.ಬಿ.ಜಯಚಂದ್ರ ವೀಕ್ಷಿಸಿದರು.

ಕಳ್ಳಂಬೆಳ್ಳ ಹೋಬಳಿ ವ್ಯಾಪ್ತಿಯ ಬಸರಿಹಳ್ಳಿ, ಉಮಾಪತಿ ಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹುಂಜಿನಾಳು, ಆಮಲಗೊಂದಿಯಲ್ಲಿ ಮಳೆಯಿಂದ ತುಂಬಿ ಹರಿಯುತ್ತಿರುವ ಚೆಕ್ ಡ್ಯಾಂ ಕಂ ಬ್ಯಾರೇಜ್ ವೀಕ್ಷಿಸಿದರು.

ನನ್ನ ಅವಧಿಯಲ್ಲಿ ಕ್ಷೇತ್ರಾದ್ಯಂತ 121ಕ್ಕೂ ಹೆಚ್ಚಿನ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ 90ಕ್ಕೂ ಹೆಚ್ಚು ಬ್ಯಾರೇಜ್‌ಗಳು ಭರ್ತಿಯಾಗಿವೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.

ಇಷ್ಟು ದಿನ ಯಾವುದೇ ಕಾರಣಕ್ಕೂ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸಾಧ್ಯವಿಲ್ಲ, ಆ ಕೆರೆಗೆ ಅಲೊಕೇಷನ್ ಇಲ್ಲ, ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಹಲವಾರು ಕಾರಣ ಹೇಳುತ್ತಿದ್ದ ಮಂತ್ರಿ ಮಹಾಶಯನೊಬ್ಬನಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ, ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಷ್ಟು ಸಂತೋಷವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ಕುಟುಕಿದರು.

ಮದಲೂರು ಕೆರೆಗೆ ನೀರಿನ ಅಲೊಕೇಷನ್ ಇದೆ. ಕುಡಿಯುವ ನೀರನ್ನು ಯಾವ ಕೊಳ್ಳದಿಂದ ಯಾವ ಕೊಳ್ಳಕ್ಕಾದರೂ ತೆಗೆದುಕೊಂಡು ಹೋಗಬಹುದು. ಇದು ಕೋರ್ಟ್ ತೀರ್ಪು. ಈ ಕೆಲಸವನ್ನು ಅಂದಿನ ಜಿಲ್ಲಾಮಂತ್ರಿ ಜಯಚಂದ್ರ ಅವರೇ ಮಾಡಿರುವುದು. ತಾಲೂಕಿನಾದ್ಯಂತ ನೂರಾರು ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಿಸಿರುವುದು ಅವರೆ ಎಂಬ ಮಾಧುಸ್ವಾಮಿ ಹೇಳಿಕೆಗೆ ಜಯಚಂದ್ರ ಈ ರೀತಿ ಟಾಂಗ್ ನೀಡಿದರು. ಅಲ್ಲದೆ, ನಿಜವಾಗಿಯೂ ಜಿಲ್ಲಾ ಮಂತ್ರಿಗೆ ತಾಕತ್ತಿದ್ದರೆ ಜಿಲ್ಲೆಗೆ ಹರಿಯಬೇಕಾಗಿರುವ 25 ಟಿ.ಎಂ.ಸಿ ನೀರನ್ನು ಹಾಸನದವರಿಂದ ಬಿಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net