ಭರ್ತಿಯತ್ತ ತುಂಗಭದ್ರಾ ಜಲಾಶಯ

22 MANJU 02
Published on
  • ಎರಡನೇ ಬೆಳೆಗೂ ನೀರು ಸಿಗಲಿ ಎಂಬುದು ಅನ್ನದಾತರ ಆಶಯ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಕರ್ನಾಟಕ, ಆಂಧ್ರ, ತೆಲಂಗಾಣದ ಏಳು ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಜಲಾರಾಶಿ ಹರಿದು ಬರುತ್ತಿದೆ. 80 ಟಿಎಂಸಿ ನೀರು ಭರ್ತಿಯಾಗಿ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದ್ದು, ರೈತರಲ್ಲಿ ಹರ್ಷ ಮೂಡಿದೆ.

ಈ ಬಾರಿ ನಿರೀಕ್ಷೆಗೂ ಮೊದಲೇ ಭರ್ತಿಯಾಗಿದ್ದ ತುಂಗಭದ್ರ ಜಲಾಶಯ, ಕಳೆದ ಆ.10 ರಿಂದ ಆ.17ರ ಸಂಜೆ ವರೆಗೆ ಒಂದು ವಾರದ ಅವಧಿಯಲ್ಲಿ ತೀವ್ರ ಆತಂಕ, ಸಂಕಷ್ಟಕ್ಕೂ ಮೂಡಿಸಿದ ಜಲಾಶಯದಲ್ಲಿ ಸಾಕಷ್ಟು ನೀರು ನದಿ ಪಾಲಯಿತು. ಇದರಿಂದ ಮೊದಲ ಬೆಳೆಗೂ ನೀರು ಸುಗುವುದಿಲ್ಲ ಎಂಬ ಆತಂಕ ರೈತರಲ್ಲಿ ಸೃಷ್ಟಿಯಾಗಿತ್ತು. 19ನೇ ಕ್ರಸ್ಟ್ ಗೇಟ್ ಗೆ ತಾತ್ಕಾಲಿಕವಾಗಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿದ್ದು, ಸಧ್ಯ ಸುಖಾಂತ್ಯ ಕಂಡಿದೆ. ಮತ್ತೆ ಜಲಾಶಯಕ್ಕೆ ಉತ್ತಮ ಒಳಹರಿವಿನಿಂದ ಭರ್ತಿಯತ್ತ ಸಾಗಿದೆ. ಸಧ್ಯ 80.857 ಟಿಎಂಸಿ ನೀರು ಸಂಗ್ರಹವಿದ್ದು, ಕೆಲವೇ ದಿನಗಳಲ್ಲಿ ಇನ್ನೂ ಇದೇ ವಾರದಲ್ಲಿ 90 ಟಿಎಂಸಿ ನೀರು ಸಂಗ್ರಹವಾಗುವ ಭರವಸೆ ಹೆಚ್ಚಾಗಿದ್ದು ಮೊದಲ ಬೆಳೆಗೆ ನೀರು ಖಾತ್ರಿಯಾಗಿದೆ.

ರಾಜ್ಯದ ಪಾಲಿಗೆ ತುಂಗಭದ್ರಾ ಜಲಾಶಯ ಅನ್ನದಬಟ್ಟಲು ಎಂದೇ ಖ್ಯಾತಿಯಾಗಿದೆ. 6 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಇಲ್ಲಿ ಭತ್ತ ಉತ್ಪಾದನೆ ಮಾಡಲಾಗುತ್ತಿದೆ. ಒಂದ ಬೆಳೆಗೆ 70 ಲಕ್ಷ ಟನ್ ಅಕ್ಕಿ ಇಲ್ಲಿಂದಲೇ ರಫ್ತಾಗುತ್ತದೆ. ಮೊದಲ ಬೆಳೆಗೆ 118 ಟಿಎಂಸಿಯಷ್ಟು ನೀರು ಅಗತ್ಯವಿದ್ದು, ಈಗಾಗಲೇ ಭತ್ತ ನಾಟಿ ಬಳಿಕ 30 ಟಿಎಂಸಿಯಷ್ಟು ನೀರು ಬಳಕೆಯಾಗಿದೆ. ಬಾಕಿ 78 ಟಿಎಂಸಿ ಬೆಳೆದು ನಿಂತ ಬೆಳೆಗೆ ಪೂರೈಸಬೇಕಿದೆ. ಎರಡನೇ ಅವಧಿಯ ಬೆಳೆಗೆ 90 ಟಿಎಂಸಿ ನೀರಿನ ಅಗತ್ಯವಿದೆ. ಹಿಂಗಾರು ಮಳೆ ಉತ್ತಮವಾಗಿರುವ ಕಾರಣ ಎರಡನೇ ಬೆಳೆಗೂ ನೀರು ಸಿಗಲಿ ಎಂಬುದೇ ರೈತರ ಆಶಯವಾಗಿದೆ.

ಐದು ದಿನ 80 ಟಿಎಂಸಿ ನೀರು

ತುಂಗಭದ್ರಾ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 133 ಟಿಎಂಸಿ 28 ಟಿಎಂಸಿಯಷ್ಟು ಹೂಳು ತುಂಬಿಕೊAಡಿದ್ದು 105 ಟಿಎಂಸಿಗೆ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಕ್ರಸ್ಟ್ಗೇಟ್ ಕೊಚ್ಚಿ ಹೋದ ಬಳಿಕ 40 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗಿದೆ. ಸ್ಟಾಪ್ ಲಾಗ್ ಗೇಟ್ ಅಳವಡಿಕೆಯ ಕೊನೆ ಶನಿವಾರದಂದು ದಿನ 69 ಟಿಎಂಸಿ ನೀರು ಸಂಗ್ರಹವಿತ್ತು. ಸ್ಟಾಪ್‌ಲಾಗ್ ಗೇಟ್ ಅಳವಡಿಕೆಯ 5 ದಿನಗಳಲ್ಲಿ 10 ಟಿಎಂಸಿಯಷ್ಟು ನೀರು ಜಲಾಶಯದ ಮಡಿಲು ಸೇರಿದೆ. ಮೇಲ್ಬಾಗದಲ್ಲಿ ಮಳೆ ಹೆಚ್ಚಿದ್ದರ ಪರಿಣಾಮ ಒಳ ಹರಿವು ಏರಿಕೆಯಲ್ಲಿದೆ. ಗುರುವಾರ 33 ಸಾವಿರ ಕ್ಯೂಸೆಕ್ ಒಳ ಹರಿವಿವಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ಕ್ಯೂಸೆಕ್ ಒಳ ಹರಿವು ಹರಿದು ಬರುವ ನಿರೀಕ್ಷೆಯಿದ್ದು, ಇದೇ ವಾರದಲ್ಲಿ ಆರಂಬವಾದರೆ ಆದಷ್ಟು ಬೇಗ ಜಲಾಶಯ ಸಂಪೂರ್ಣ ತುಂಬುವ ವಿಶ್ವಾಸ ವ್ಯಕ್ತವಾಗುತ್ತಿದೆ.

ಖಾಯಂ ಅಧಿಕಾರಿ

ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಭದ್ರಾ ವಲಯ ಮುನಿರಾಬಾದ್‌ನ ಕೇಂದ್ರ ಕಚೇರಿಗೆ ಮುಖ್ಯ ಎಂಜಿನಿಯರ್, ಸೂಪಡೆಂಟ್ ಎಂಜಿನಿಯರ್ ಸ್ಥಾನಕ್ಕೆ ಪ್ರಭಾರಿಗಳನ್ನೇ ನೇಮಕ ಮಾಡತ್ತಾರೆ ಎನ್ನುವ ಆರೋಪಗಳಿದ್ದವು. ಈಗ ಸರ್ಕಾರ ಈ ಅವಘಡದ ಬಳಿಕ ಕಾಯಂ ಅಧಿಕಾರಿಗಳನ್ನು ನೇಮಕ ಮಾಡಿದೆ. ಸಿಇ ಹುದ್ದೆಗೆ ಹನುಮಂತ ಜಿ.ದಾಸರ್ ಅವರನ್ನು ನೇಮಕ ಮಾಡಿದೆ.

ಸೋರಿಕೆ ಸಂಪೂರ್ಣ ಸ್ಥಗಿತ

ಟಿಬಿ ಡ್ಯಾಂನ ಕಿತ್ತು ಹೋಗಿದ್ದ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ನಂತರವೂ ಅಲ್ಪ ಪ್ರಮಾಣದ ನೀರು ಸೋರಿಕೆ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಈಗ ಸಾಗರ ಮೂಲದ ಮುಳುಗು ತಜ್ಞರು ಹತ್ತಿ, ಚೀಲದತಟ್ಟು ಮತ್ತು ಮರಳು ಬಳಸಿ ಸೋರಿಕೆ ತಡೆಗಟ್ಟಿದ್ದಾರೆ. ಜಲಾಶಯಕ್ಕೆ ಉತ್ತಮ ಒಳ ಹರಿವೂ ದಾಖಲಾಗುತ್ತಿದೆ. ಇದರಿಂದ ಅಚ್ಚುಕಟ್ಟು ರೈತರು ನಿರಾಳರಾಗಿದ್ದಾರೆ.

ತುಂಗಭದ್ರ ಜಲಾಶಯ 19ನೇ ಗೇಟ್ ಅವಘಡದಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಟಾಪ್ ಲಾಗ್ ಗೇಟ್ ಅಳವಡಿಸಿ 70ಟಿಎಂಸಿ ನೀರು ಉಳಿಸಲಾಗಿದೆ. ಜಲಾಶಯಕ್ಕೆ ನಿರೀಕ್ಷೆಗಿಂತ ಉತ್ತಮ ಒಳಹರಿವು ದಾಖಲಾಗುತ್ತಿದೆ. ಡ್ಯಾಂ ಮತ್ತೇ ಭರ್ತಿ ಆಗುತ್ತದೆ. ಸಿಎಂ ಸಿದ್ದರಾಮಯ್ಯ ಅವರೇ ಬಾಗೀನ ಅರ್ಪಣೆ ಮಾಡುತ್ತಾರೆ. - ಶಿವರಾಜ ತಂಗಡಗಿ, ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net