

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಗೋಡೆ ಬಲಿಷ್ಠಗೊಳಿಸುವ ಜತೆಗೆ ಹೊಳಪು ನೀಡುವ ಕಾಮಗಾರಿ ಟಿಬಿಬಿ ಕೈಗೆತ್ತಿಕೊಂಡಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಹೈದರಾಬಾದ್ ನಿಜಾಮ, ಇತ್ತ ಹೊಸಪೇಟೆ ಕಡೆ ಮದ್ರಾಸ್ ಪ್ರಾಂತೀಯ ಸರ್ಕಾರ 1945ರ ಫೆ.28ರಂದು ಜಲಾಶಯಕ್ಕೆ ಅಡಿಗಲ್ಲು ಹಾಕಲಾಯಿತು. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಐದು ಜಿಲ್ಲೆಗಳ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ. ಅನೇಕ ಸಕ್ಕರೆ ಕಾರ್ಖಾನೆಗಳು, ಅಕ್ಕಿ ಗಿರಣಿಗಳು, ವಿವಿಧ ಕೈಗಾರಿಕೋದ್ಯಮಗಳು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನೆಲೆಯೂರಿವೆ. ಮೀನುಗಾರಿಕೆ ದೊಡ್ಡ ಉದ್ಯಮವಾಗಿ ಬದಲಾಗಿದೆ. ಇದರಿಂದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸುಧಾರಿಸಿದೆ. ನಿರ್ವಹಣೆ ಸಂಬಂಧ ಹಲವು ಬಾರಿ ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ, ಇಂಥ ಕಾಮಗಾರಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
ಜಲಾಶಯದಲ್ಲಿ ಈ ಬಾರಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಇದರಿಂದ ಜಲಾಶಯದ 33 ಗೇಟ್‌ಗಳು ಸೇರಿದಂತೆ ಹೊಸಪೇಟೆಯಿಂದ ಮುನಿರಬಾದ್‌ವರೆಗೆ ಜಲಾಶಯದ ಗೋಡೆ ಮತ್ತಷ್ಟು ಹೊಳೆಯಲಿವೆ. 70 ವರ್ಷ ಹಳೆಯದಾಗಿರುವ ಜಲಾಶಯವನ್ನು ಈ ಹಿಂದೆ ಸುರಕಿ ಹಾಗೂ ಕಲ್ಲುಗಳಿಂದ ನಿರ್ಮಿಸಲಾಗಿದೆ. ನೀರಿನ ಅಲೆಗಳ ಅಬ್ಬರಕ್ಕೆ ಕಲ್ಲುಗಳ ಮಧ್ಯೆ ಅಂತರ ಏರ್ಪಟ್ಟಿದೆ. ಆದ್ದರಿಂದ ಮೊದಲ ಬಾರಿಗೆ ವಿಶೇಷ ವಸ್ತುಗಳನ್ನು ಬಳಸಿ ಜಲಾಶಯದ ಜೀವನಮಟ್ಟ ಹೆಚ್ಚಿಸುವ ಜತೆಗೆ ಬಲಪಡಿಸುವ ಕಾರ್ಯ ನಡೆದಿದೆ.
ಏಳು ದಶಕದ ಹಿಂದೆ ನಿರ್ಮಾಣವಾಗಿರುವ ಜಲಾಶಯದ ಕೆಳಗಡೆ ಭಾಗದಲ್ಲಿ ಪಾಚಿಗಟ್ಟಿದೆ. ಇದನ್ನು ಸ್ಯಾಂಡ್ ಬ್ಲಾಸ್ಟಿಂಗ್ ಮಾಡಿ ತೆಗೆಯಲಾಗುತ್ತಿದೆ. ಗೇಟ್ ಗಳಿಗೆ (ಸ್ಯಾಂಡ್‌ಬ್ಲಾಸ್ಟ್) ಹಳೆಯ ಬಣ್ಣ ತೆಗೆದುಹಾಕಿ, ಹೊಸ ಬಣ್ಣ ಬಳೆಯಲಾಗುತ್ತಿದೆ. ಇದಕ್ಕೆ ವಿಶೇಷವಾಗಿ ಪೇಂಟಿಂಗ್ ಮಾಡಲಾಗುತ್ತಿದೆ. ಜಲಾಶಯಕ್ಕೆ ನೀರು ಬರುವ ಮುನ್ನ ಕಾಮಗಾರಿ ಮುಗಿಸಬೇಕಿತ್ತು. ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿದ್ದು, ಮುಂದಿನ ವರ್ಷ ಮುಗಿಯಲಿದೆ ಎಂದು ಅಧಿಕಾರಿಗಳ ಮಾತು. ಕಾಮಗಾರಿ ನಂತರ ಜಲಾಶಯ ಹೊಳೆಯಲಿದ್ದು, ನೋಡುಗರಿಗೆ ವಿಶೇಷ ಅನುಭವ ನೀಡುವ ಜತೆಗೆ ಡ್ಯಾಂ ಬಾಳಿಕೆ ಕಾಲವೂ ಹೆಚ್ಚಾಗಲಿದೆ.
ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿಗಳು ನಡೆಯುತ್ತಿದೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಅತಿ ಕಡಿಮೆ ಇರುವುದರಿಂದ ನಿರ್ವಹಣೆ ಕಾಮಗಾರಿಗಳನ್ನು ಮಾಡಲಾಗುತ್ತದೆ. ಈಗ ಗೇಟ್ ಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನಡೆಯುವ ಕಾಮಗಾರಿ ಇದಾಗಿದೆ. ಒಟ್ಟು 33 ಗೇಟ್‌ಗಳಿದ್ದು, ಪ್ರತಿ ವರ್ಷ 11 ಗೇಟ್‌ಗಳ ಸ್ವಚ್ಛತೆ, ಬಣ್ಣ ಬಳಿಯುವ ಕೆಲಸ ನಡೆಯುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಗೇಟ್‌ಗಳ ನವೀಕರಣ ಕಾರ್ಯ ನಡೆಯುತ್ತದೆ. ಸದ್ಯ ಜಲಾಶಯದಲ್ಲಿ 3.817 ಟಿಎಂಸಿ ಅಡಿ ನೀರಿದೆ. ಪ್ರಸ್ತುತ ಡ್ಯಾಂನಲ್ಲಿ ಕಡಿಮೆ ನೀರು ಇರುವುದರಿಂದ ವಾರ್ಷಿಕ ನಿರ್ವಹಣೆ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡಲಾಗುತ್ತಿದೆ.
ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಮೊದಲ ಬಾರಿಗೆ ಗೊಡೆಗಳನ್ನು ಬಲಿಷ್ಠಗೊಳಿಸುವ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಸ್ಯಾಂಡ್ ಬ್ಲಾಸ್ಟಿಂಗ್ ಮಾಡಿ ಗೋಡೆಗಳ ಮೇಲೆ ಪಾಚಿ ತೆಗೆಯಲಾಗುತ್ತಿದೆ. ಈ ಕಾಮಗಾರಿಯಿಂದ ಜಲಾಶಯ ಬಲಿಷ್ಠದ ಜತೆ ಬಾಳಿಕೆ ಕಾಲವೂ ಹೆಚ್ಚಾಗಲಿದೆ. ರಾಘವೇಂದ್ರ ಸೆಕ್ಷನ್ ಆಫೀಸರ್, ಟಿಬಿಡ್ಯಾಂ, ಹೊಸಪೇಟೆ