

ಹೊಸಪೇಟೆ: ಮಳೆನಾಡಿನಲ್ಲಿ ಭಾರಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಬುಧವಾರ 33 ಗೇಟ್‌ಗಳಿಂದ 1.57 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಯಿತು. ಹಂಪಿಯ ಕೆಲ ಸ್ಮಾರಕಗಳು ಮತ್ತೆ ಮುಳುಗಡೆಯಾಗಿವೆ.
ಭದ್ರಾ ಜಲಾಶಯದಿಂದ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು, ತುಂಗ ಜಲಾಶಯದಿಂದ 72 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹಾಗೂ ವರದ ನದಿಯಿಂದ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುತ್ತಿದೆ. ಆದ್ದರಿಂದ ಜಲಾಶಯಕ್ಕೆ ಸಧ್ಯ 91 ಸಾವಿರಕ್ಕೂ ಒಳಹರಿವಿನ ಪ್ರಮಾಣವಿದ್ದು, ಜಲಾಶಯದ 33 ಗೇಟ್‌ಗಳ ಪೈಕಿ 23 ಗೇಟ್ 4 ಅಡಿ ಹಾಗೂ 10 ಗೇಟ್ ಒಂದು ಅಡಿ ಎತ್ತರಿಸಿ 1,57,596 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.
ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗಗಳು ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ. ಕಂಪಭೂಪ ಮಾರ್ಗ ಬಂದ್ ಆಗಿದ್ದು, ಕೋದಂಡರಾಮಸ್ವಾಮಿ ದೇವಾಲಯದ ಆವರಣದ ವರೆಗೆ ನೀರು ಮತ್ತೆ ಬಂದಿದೆ. ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು ಸ್ಮಾರಕಗಳ ವೀಕ್ಷಣೆಗೆ ಅಚ್ಯುತರಾಯ ದೇವಾಲಯದ ಮಾರ್ಗ ಬಳಸಲಾಗುತ್ತಿದೆ. ನದಿಯ ನೀರು ಸೀತೆ ಸೆರಗು ಬಳಿಯೂ ಹರಿಯತ್ತಿದೆ. ತುಂಗಭದ್ರಾ ನದಿ ರಭಸವಾಗಿ ಹರಿಯುತ್ತಿರುವುದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನೂ ತುಂಗಭದ್ರಾ ಜಲಾಶಯದ 33 ಗೇಟ್‌ಗಳನ್ನು ಮತ್ತೆ ತೆರೆದಿರುವುದರಿಂದ ಜಲಾಶಯ ವೀಕ್ಷಣೆಗೂ ಜನರ ದಂಡು ಹರಿದು ಬರುತ್ತಿದೆ.
1633 ಅಡಿಯ ಜಲಾಶಯದದಲ್ಲಿ ಬುಧವಾರ 1631.21 ಅಡಿಗೆ 98.687 ಟಿಎಂಸಿ ನೀರು ಭರ್ತಿಯಾಗಿದೆ. ಜಲಾಶಯದ ಒಳಹರಿವು 1.57 ಲಕ್ಷ ಕ್ಯುಸೆಕ್ ಮೀರಿರುವ ಹಿನ್ನೆಲೆಯಲ್ಲಿ ಜಲಾಶಯದ 33 ಗೇಟ್‌ಗಳನ್ನು ತೆರೆದು ನದಿಗೆ 1.57 ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ಹರಿಬಿಡಲಾಯಿತು. ಜಲಾಶಯದ ಒಳ ಹರಿವು ಏರು ಗತಿಯಲ್ಲಿರುವುದರಿಂದ ಹೊರ ಹರಿವಿನಲ್ಲೂ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ.