

ಹೊಸಪೇಟೆ: ತುಂಗಾಭದ್ರಾ ಜಲಾಶಯ ಈ ವರ್ಷ ಸಂಪೂರ್ಣ ಭರ್ತಿಯಾಗಿದ್ದು ಬುಧವಾರ 10 ಕ್ರಸ್ಟ್ ಗೇಟ್ ಒಂದು ಅಡಿ ಏರಿಸುವ ಮೂಲಕ ಬುಧವಾರ 20.5 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹೊರ ಬಿಡಲಾಯಿತು.
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾಭದ್ರಾ ಜಲಾಶಯದಲ್ಲಿ 87700 ಕ್ಯೂಸೆಕ್ ಒಳಹರಿವು ಇದ್ದು, ನಿತ್ಯ ಸರಾಸರಿ 9 ಟಿಎಂಸಿ ಅಡಿ ನೀರು ಹರಿದು ಬರುತ್ತಿದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ ಈಗಾಗಲೇ 98.961 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ತುಂಗಭದ್ರ ಜಲಾಶಯದಲ್ಲಿ 1631 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ 3 ಅಡಿ ಅಷ್ಟೇ ಬಾಕಿಯಿದೆ. ಆದ್ದರಿಂದ ಅಪಾರ ಪ್ರಮಾಣದ ನೀರನ್ನ ನದಿಗೆ ಬಿಡಲಾಗಿದೆ. ಹೀಗಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾದಂತೆ ಹೆಚ್ಚುವರಿ ನೀರನ್ನ ನದಿಗೆ ಹರಿಬಿಡಲಾಗುತ್ತಿದೆ. ಜತೆಗೆ ಹಂಪಿಯ ನದಿ ಪಾತ್ರದಲ್ಲಿರುವ ಕೆಲ ಸ್ಮಾರಕ, ಮಂಟಪಗಳು ಮುಳುಗಡೆಯಾಗಲಿವೆ. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ತುಂಗಾಭದ್ರಾ ಡ್ಯಾಂ ಭರ್ತಿಯಾಗಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿರುವ ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯದತ್ತ ಬರುತ್ತಿದ್ದಾರೆ.