

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ನಾಗೇಶ್ ತಿಳಿಸಿದರು.
ನಗರದ ಎಸ್‌ಜೆಆರ್‌ಎಸ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023ರ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದಲ್ಲಿ ಮಾತನಾಡಿದರು.
ರೋಗ ಪತ್ತೆಗೆ ತಾಲೂಕಿನ ಆರೋಗ್ಯ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮಿನಿಂದ ಬಳಲುತ್ತಿರುವವರಿಂದ ಕಫ ಸಂಗ್ರಹಿಸಿ, ಪರೀಕ್ಷೆ ನೆಡೆಸಲಿದ್ದಾರೆ. ಕ್ಷಯ ರೋಗ ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ರೋಗ ಗುಣವಾಗಲಿದ್ದು, ಸೋಂಕಿತರು ಭಯಪಡುವ ಅವಶ್ಯವಿಲ್ಲ. ತಾಲೂಕಿನಲ್ಲಿ 128 ಸಕ್ರಿಯ ಕ್ಷಯ ರೋಗಿಗಳಿದ್ದು, ಅವರಿಗೆ ಚಿಕಿತ್ಸೆ ಹಾಗೂ ಬಡವರಿಗೆ ಮಾಸಿಕ ದಿನಸಿ ಕಿಟ್ ನೀಡಲಾಗುತ್ತಿದೆ ಎಂದರು.
ತಾಲೂಕು ಕ್ಷಯ ರೋಗ ಚಿಕಿತ್ಸಾ ಘಟಕದ ಮೇಲ್ವಿಚಾರಕ ಸುದೀಪ್ ಮಾತನಾಡಿ, ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ವಿವಿಧ ತಂಡಗಳನ್ನು ರಚಿಸಿ, ಜು.17ರಿಂದ ಆಗಸ್ಟ್ 2ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳ ಹಾಗೂ ಕ್ಷ-ಕಿರಣ ಅಧಿಕಾರಿಗಳ ಸಹಕಾರದೊಂದಿಗೆ ರೋಗ ಪತ್ತೆ ಹಚ್ಚಲಾಗುವುದು. ಬಳಿಕ ಫಾರ್ಮಸಿ ಅಧಿಕಾರಿಗಳ ನೆರವಿನೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು ಎಂದರು.
ಮುಖ್ಯಶಿಕ್ಷಕ ಬಿ.ನಾಗರಾಜ್ ಮಾತನಾಡಿ, ಮಕ್ಕಳು ಕ್ಷಯ ರೋಗದ ಬಗ್ಗೆ ಮಾಹಿತಿ ಪಡೆದು, ಮನೆಯ ಸುತ್ತ ಮುತ್ತಲಿನಲ್ಲಿ ವಾಸವಿರುವ ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚಿನ ಸಮಯ ಕೆಮ್ಮು ಇದ್ದಲ್ಲಿ ಅಂತಹವರಿಗೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಬಹುದಾಗಿದೆ. ಈ ಬಗ್ಗೆ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿ, ಆರೋಗ್ಯ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಂಡರೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಕಿ ಸುನಂದಾ, ಆರೋಗ್ಯ ಇಲಾಖೆ ಅಧಿಕಾರಿಗಳಾದ ರವಿ ಕುಮಾರ್, ಶ್ರೀದೇವಿ, ಚಂದ್ರಶೇಖರ್ ಇದ್ದರು.