

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕ್ಷಯರೋಗ ಮಾರಣಾಂತಿಕ ಖಾಯಿಲೆ ಅಲ್ಲ, ಚಿಕಿತ್ಸೆ ಮೂಲಕ ಗುಣಪಡಿಸಬಹುದು, ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಭಯಭೀತರಾಗದೇ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ರೋಗದಿಂದ ಗುಣಮುಖರಾಗಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ-100 ದಿನಗಳ ವಿಷೇಶ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ಷಯರೋಗಿಗಳ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವಲ್ಲಿ ಕಾರ್ಯಪ್ರವ್ರತ್ತರಾಗಿದ್ದಾರೆ. ಡಿ.7 ರಿಂದ 2025 ರ ಮಾ.17 ವರೆಗೆ ಜಿಲ್ಲೆಯಾದ್ಯಂತ 100 ದಿನಗಳ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಸಹಕರಿಸಬೇಕು: ಈ ಆಂದೋಲನಕ್ಕೆ ಚುನಾಯಿತ ಜನ ಪ್ರತಿನಿಧಿಗಳ, ಟಿ.ಬಿ.ಚಾಂಪಿಯನಸ್,(ಕ್ಷಯರೋಗದಿಂದ ಗುಣಹೊಂದಿರುವವರು) ನಿಕ್ಷಯ್ ಮಿತ್ರ(ಸ್ಥಳೀಯವಾಗಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ದಾನಿಗಳು), ಖಾಸಗಿ ಆರೋಗ್ಯ ಸಂಸ್ಥೆಗಳು, ಪಂಚಾಯತ್ ರಾಜ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದ ಜತೆಗೆ ಆರೋಗ್ಯ ಸಿಬ್ಬಂದಿ ತಪಾಸಣೆಗಾಗಿ ಮನೆಗೆ ಬಂದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಇಒ ಮನವಿ ಮಾಡಿದರು. ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಆರೋಗ್ಯ ಸಿಬ್ಬಂದಿ ಮನೆಗಳ ಬಳಿ ಬಂದಾಗ ವಿರೋಧಿಸುವುದು ಸರಿಯಾಗಿ ಸ್ಪಂದಿಸದಿರುವ ಬಗ್ಗೆ ದೂರುಗಳು ಬಂದಿವೆ. ಇಂಥ ಪರಿಸ್ಥಿತಿ ಬರದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
40 ಪಂಚಾಯಿತಿ ಕ್ಷಯಮುಕ್ತ! ಪ್ರಸ್ತುತ ದಿನಮಾನಗಳ ಕ್ಷಯರೋಗಕ್ಕೂ ಸೂಕ್ತ ಚಿಕಿತ್ಸೆ ಇದ್ದು, ಸಕಾಲದಲ್ಲಿ ಔಷದೋಪಚಾರ ಪಡೆದುಕೊಂಡು ಆರೋಗ್ಯವಂತರಾಗಬೇಕು. 2023-24 ರಲ್ಲಿ 8 ಗ್ರಾಮ ಪಂಚಾಯತಿಗಳನ್ನು ಕ್ಷಯಮುಕ್ತ ಗ್ರಾಮ ಪಂಚಾಯತಿ ಎಂದು ಘೋಷಿಸಲಾಗಿದೆ. ಪ್ರಸಕ್ತ 2024-25 ನೇ ಸಾಲಿನಲ್ಲಿ 40 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಮಾನದಂಡಗಳ ಅನ್ವಯ ಕಾರ್ಯರಂಭ ಮಾಡಲಾಗಿದೆ ಎಂದು ಡಾ.ಎನ್.ಅನುರಾಧಾ ಮಾಹಿತಿ ನೀಡಿದರು.
ಪ್ರತಿವರ್ಷ ತಪಾಸಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 35 ಸಾವಿರದಷ್ಟು ಸಂಭಾವ್ಯ ಕ್ಷಯರೋಗಿಗಳ ತಪಾಸಣೆಗೊಳಪಡಿಸಲಾಗುತ್ತಿದೆ. ಇದರಲ್ಲಿ 800 ರಿಂದ 900 ಹೊಸ ಕ್ಷಯರೋಗ ಪ್ರಕರಣಗಳು ದಾಖಲಾಗುತ್ತಿವೆ. 1400-1500 ಕ್ಷಯರೋಗ ಸಂಪರ್ಕಿತರಿಗೆ ಸೋಂಕಿನ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಎಸ್.ನಾಗೇಶ್ ತಿಳಿಸಿದರು. ಈ ರೋಗ ಬಾಧಿತರಲ್ಲಿ ಶೇ. 86 ರೋಗಿಗಳನ್ನು ಪರಿಣಾಮಕಾರಿ ಚಿಕಿತ್ಸಾ ಆರೈಕೆಗಳೊಂದಿಗೆ ಗುಣಪಡಿಸಲಾಗುತ್ತಿದೆ. 2015ರಿಂದ ಕ್ಷಯರೋಗ ಪ್ರಕರಣಗಳು ಕ್ರಮೇಣವಾಗಿ ಪ್ರತಿ ಲಕ್ಷ ಜನರಲ್ಲಿ 237 ರಿಂದ 80 ಕ್ಷಯರೋಗ ಪ್ರಕರಣಗಳು ಇಳಿಮುಖವಾಗುತ್ತಿದೆ ಎಂದು ಹೇಳಿದರು. ಕ್ಷಯ ರೋಗದ ಬಗ್ಗೆ ಹಲವು ಮೂಡನಂಬಿಕೆಗಳು ಹಾಗೂ ತಪ್ಪು ಕಲ್ಪನೆಗಳಿದ್ದವು. ಆದರೆ ಜನರು ಇದೀಗ ಜಾಗೃತರಾಗಿದ್ದಾರೆ. ಇದರಿಂದ ಈ ರೋವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ ಎಂದರು. ಕ್ಷಯ ರೋಗದ ಲಕ್ಷಣಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು, ಲಕ್ಷಣಗಳು ಕಂಡುಬಂದ ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬಹುದು. ಚಿಕಿತ್ಸಾಲಯಗಳಲ್ಲಿ ಸುಲಭವಾಗಿ ಪರೀಕ್ಷೆ ಹಾಗೂ ಚಿಕಿತ್ಸಾ ವಿಧಾನಗಳಿರುವುದರಿಂದ ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.