ಕ್ಷಯ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮನವಿ

05_02_Mdy_02(TB Trining)
Published on

ಮಂಡ್ಯ: ಕ್ಷಯ ರೋಗವನ್ನು ಮುಂಚಿತವಾಗಿಯೇ ಗುರುತಿಸುವುದು ಮುಖ್ಯವಾಗಬೇಕು. ಮಂಡ್ಯ ಜಿಲ್ಲೆಯು ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅನುಷ್ಠಾನದಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ಆದ್ದರಿಂದ ಕ್ಷಯ ರೋಗ ನಿರ್ಮೂಲನೆಗೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮನವಿ ಮಾಡಿದರು.

ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ಖಾಸಗಿ ವೈದ್ಯರಿಗೆ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಟಿಬಿ ಮತ್ತು ಭಾರತ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಕ್ಷಯ ರೋಗಿಗಳಿಗೆ ದಾನಿಗಳಿಂದ ಉಚಿತ ಪೌಷ್ಠಿಕ ಆಹಾರದ ಕಿಟ್ ಅನ್ನು ವಿತರಿಸಲಾಗುತ್ತಿದೆ. ಅಂತೆಯೇ ಜಿಲ್ಲೆಯಲ್ಲಿ ಟಿಬಿ ಸೋಂಕನ್ನು ಪತ್ತೆ ಹಚ್ಚುವ ಐಜಿಆರ್‌ಎ ಪರೀಕ್ಷೆ ನಡೆಸುತ್ತಿದ್ದು, ಉಚಿತ ಪರೀಕ್ಷೆ ಹಾಗೂ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದನ್ನು ಅಗತ್ಯವಿರುವವರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಕ್ಷಯ ರೋಗ ಕೇಂದ್ರದ ಜಂಟಿ ನಿರ್ದೇಶಕ ಡಾ.ಅನಿಲ್, ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಕ್ಷಯ ಮುಕ್ತ ಮಂಡ್ಯ ಜಿಲ್ಲೆ ಕುರಿತು ಖಾಸಗಿ ವೈದ್ಯರ ಸಹಭಾಗಿತ್ವ ಬಗ್ಗೆ ಉಪನ್ಯಾಸವನ್ನು ನೀಡಿದರು. ನಂತರ 2025 ರೊಳಗೆ ಕ್ಷಯ ಮುಕ್ತ ಜಿಲ್ಲೆಯ ನಾಗಿಸಲು ಜಿಲ್ಲೆಯ ಎಲ್ಲ ಖಾಸಗಿ ವೈದ್ಯರ ಸಹಕರಿಸಲು ಮನವಿ ಮಾಡಿದರು.

ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ವಿಚಾರ ಸಂಕಿರಣ ಉದ್ಘಾಟಿಸಿದರು. ಡಾ.ಭವಾನಿ ಶಂಕರ್, ಡಾ.ಜವರೇಗೌಡ, ಡಾ.ವಿನಯ್, ಡಾ.ಕಕ್ಕಿಲಾಯ, ಡಾ.ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net