

ಹುಬ್ಬಳ್ಳಿ : ಇಲ್ಲಿನ ಕಲಾ ಸುಜಯ ನೃತ್ಯ ಅಕಾಡೆಮಿ ವತಿಯಿಂದ ಜ. 12 ರಂದು ಸಂಜೆ 5.30ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಚೈತನ್ಯ ಉಪಾಧ್ಯಾಯ ಹಾಗೂ ಸನ್ನಿಧಿ ರಾವ್ ತಾಯಿ-ಮಗಳ ಭರತನಾಟ್ಯ ರಂಗಪ್ರವೇಶ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಸಂಯೋಜಕ ಸುಜಯ ಶಾನಭಾಗ, ತಾಯಿ-ಮಗಳಿಬ್ಬರೂ ಏಕಕಾಲಕ್ಕೆ ರಂಗಪ್ರವೇಶ ಮಾಡುತ್ತಿರುವುದು ವಿಶೇಷ ಎಂದರು.
ಚೈತನ್ಯ ಉಪಾಧ್ಯಾಯ ಅವರು ಬ್ಯಾಂಕ್ವೊಂದರ ಉದ್ಯೋಗಿಯಾಗಿದ್ದು, ಮಗಳು ಸನ್ನಿಧಿ ರಾವ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ ಐದು ವರ್ಷಗಳಿಂದ ಇಬ್ಬರೂ ತಮ್ಮ ಬಳಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕೇರಳ ಎಡನೀರು ಶಂಕರಾಚಾರ್ಯರ ಸಂಸ್ಥಾನದ ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ, ಕರ್ನಾಟಕ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಬಿ. ಗೋಪಾಲಕೃಷ್ಣ ಸಾಮಗ, ದ.ಕ. ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಪ್ರಸಾದ ರಾವ ಹಾಗೂ ಚೈತನ್ಯ ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.