ಟ್ಯಾಕ್ಸಿ ಸೇವೆಯಲ್ಲಿರುವವರು ಶಿಸ್ತು ಕಾಪಾಡಿ: ವೆಂಕಟ್ ರಾಜಾ

dc sabhe
Published on

ಮಡಿಕೇರಿ: ಟ್ಯಾಕ್ಸಿ ಸೇವೆ ಒದಗಿಸುತ್ತಿರುವವರು ಶಿಸ್ತು ಕಾಪಾಡಿಕೊಳ್ಳಬೇಕು. ಜತೆಗೆ ಪ್ರತೀ ೬ ತಿಂಗಳಿಗೊಮ್ಮೆ ಒಂದು ದಿನಕ್ಕೆ ಎಷ್ಟು ದರ ಎಂಬ ಬಗ್ಗೆ ದರಪಟ್ಟಿಯ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಹೋಂ ಸ್ಟೇ ಮಾಲೀಕರು ಹಾಗೂ ಟ್ಯಾಕ್ಸಿ ಮಾಲಿಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕ ಹಾಗೂ ಸೈನೇಜ್ ಬೋರ್ಡ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಮುಂದಾಗಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.


ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು. ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಬೇಕು. ಜಿಲ್ಲೆಯಲ್ಲಿ ೪ ಸಾವಿರ ಹೋಂ ಸ್ಟೇಗಳಿದ್ದು, ಸುಮಾರು ೧೯೦೦ ರಷ್ಟು ಹೋಂ ಸ್ಟೇಗಳು ನೋಂದಣಿಯಾಗಿವೆ. ಉಳಿದ ಹೋಂ ಸ್ಟೇಗಳನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.


ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್‌ನ ಅಧ್ಯಕ್ಷ ಬೆನ್ ಗಣಪತಿ ಮಾತನಾಡಿ, ಹೋಂ ಸ್ಟೇ ಆರಂಭಿಸುವಾಗ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಿಂಬರಹ ಪಡೆಯಬೇಕಿದೆ. ಜತೆಗೆ ಪೊಲೀಸ್ ಇಲಾಖೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ಎನ್‌ಒಸಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಸಕಾಲದಲ್ಲಿ ಪ್ರಕ್ರಿಯೆಗಳು ಆಗಬೇಕು ಎಂದು ಮನವಿ ಮಾಡಿದರು.


ಮಾಂದಲ್‌ಪಟ್ಟಿ ಮತ್ತು ಅಬ್ಬಿಪಾಲ್ಸ್ ಮತ್ತಿತರ ಕಡೆಗಳಲ್ಲಿ ಯೆಲ್ಲೋ ಬೋರ್ಡ್ ಹೊರತುಪಡಿಸಿ ವೈಟ್‌ಬೋರ್ಡ್ ವಾಹನಗಳು ಸಹ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಟ್ಯಾಕ್ಸ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗಧಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ, ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಸಮವಸ್ತ್ರ, ಹಾಗೂ ಬ್ಯಾಡ್ಜ್ ಹೊಂದಿರಬೇಕು. ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ದರ ನಿಗಧಿಪಡಿಸಿ ದರಪಟ್ಟಿಯ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ದೇವಯ್ಯ, ಟ್ಯಾಕ್ಸಿ ಹಾಗೂ ಜೀಪುಗಳಿಗೆ ವೇಗ ನಿಯಂತ್ರಣ ಅಳವಡಿಸಬೇಕು ಎಂದು ಸಲಹೆ ಮಾಡಿದರೆ, ಹೋಂ ಸ್ಟೇ ಅಸೋಷಿಯೇಷನ್‌ನ ಮೋಂತಿ ಗಣೇಶ್ ಮಾತನಾಡಿ, ಮಾಂದಲ್‌ಪಟ್ಟಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.


ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಟ್ಯಾಕ್ಸಿ ಸೇವೆ ಒದಗಿಸುತ್ತಿರುವವರು ಶಿಸ್ತು ಕಾಪಾಡಿಕೊಳ್ಳಬೇಕು. ಪ್ರತೀ ೬ ತಿಂಗಳಿಗೊಮ್ಮೆ ಒಂದು ದಿನಕ್ಕೆ ಎಷ್ಟು ದರ ಎಂಬ ಬಗ್ಗೆ ದರಪಟ್ಟಿಯ ಮಾಹಿತಿ ಒದಗಿಸಬೇಕು ಎಂದರು.


ಪ್ರವಾಸಿ ತಾಣಗಳಾದ ರಾಜಾಸೀಟು ಮತ್ತು ಚೇಲಾವರ ಜಲಪಾತ ಹಾಗೂ ದುಬಾರೆ ಆನೆಶಿಬಿರ ಮತ್ತು ನಿಸರ್ಗಧಾಮ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಹಾಗೂ ಯೋಜನಾ ವರದಿಯನ್ನು ತಯಾರಿಸಲು ಮುಂದಾಗಲಾಗಿದೆ. ಹಾಗೆಯೇ ಕುಂಬೂರು ಗ್ರಾಮದ ಬಳಿ ಇರುವ ಮಕ್ಕಳ ಗುಡಿಬೆಟ್ಟ ಅಭಿವೃದ್ಧಿ ಪಡಿಸಲು ಯೋಜನಾ ವರದಿ ತಯಾರಿಸಲಾಗಿದೆ ಎಂದು ಅನಿತಾ ಭಾಸ್ಕರ್ ಸಭೆಯ ಗಮನಕ್ಕೆ ತಂದರು.


ಕೊಡಗು ಹೋಂ ಸ್ಟೇಗಳ ದರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಮತ್ತಿತರ ಮಾಹಿತಿ ಒಳಗೊಂಡ ವೆಬ್‌ಸೈಟ್ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದ್ದು, ಅನುಮತಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಕೋರಿದರು.


ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಸರ್ಕಾರದಿಂದ ವೆಬ್‌ಸೈಟ್ ಅಭಿವೃದ್ಧಿಪಡಿಸಿ ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ತಾಲ್ಲೂಕುವಾರು ನೋಂದಾಯಿತ ಹೋಂಸ್ಟೇಗಳ ನಿಖರ ಮಾಹಿತಿ ದೊರೆಯಲಿದೆ. ಪ್ರವಾಸಿಗರಿಗೆ ಆನ್‌ಲೈನ್ ಮೂಲಕ ಹೋಂಸ್ಟೇ ಮಾಹಿತಿ ದೊರೆಯುವಂತಾಗಬೇಕು. ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ಮುಂಚಿತವಾಗಿ ಕಾಯ್ದಿರಿಸಲು ಸಹಕಾರಿ ಆಗಲಿದೆ ಎಂದರು.


ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು. ಗಾಜಿನ ಸೇತುವೆ ನಿರ್ಮಿಸಲು ಹಲವರಿಂದ ಬೇಡಿಕೆ ಬರುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.


ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಗಾಜಿನ ಸೇತುವೆ ನಿರ್ಮಿಸಲು ಸ್ವಂತ ಜಾಗ ಹೊಂದಿರಬೇಕು. ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಅರಣ್ಯ ಇಲಾಖೆ ಅಥವಾ ಇಕೋ ಟೂರಿಸಂ ವ್ಯಾಪ್ತಿಗೆ ಬರಬಾರದು. ಈ ಎಲ್ಲಾ ಮಾನದಂಡಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಕೂರ್ಗ್ ಹೋಂ ಸ್ಟೇ ಅಸೋಷಿಯೇಷನ್‌ನ ಕೆ.ಎಂ.ಕರುಂಬಯ್ಯ, ಹೋಟೆಲ್ ಅಸೋಷಿಯೇಷನ್‌ನ ಉಪಾಧ್ಯಕ್ಷ ಜಾಹೀರ್ ಅಹಮದ್, ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಜಿ ಅಥಿತಿ ಭಾಸ್ಕರ್, ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಅಧ್ಯಕ್ಷ ರೋಹಿತ್ ಹಲವು ವಿಚಾರ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ನೇತ್ರಾವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net