ಚುನಾವಣಾ ಕರ್ತವ್ಯ ಟ್ಯಾಕ್ಸಿ ಚಾಲಕರ ಅಸಮಾಧಾನ

taxi
Published on

ಮಂಗಳೂರು: ಚುನಾವಣಾ ಕರ್ತವ್ಯಕ್ಕೆ ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್‌ಗಳನ್ನು ಉಪಯೋಗಿಸುವ ಬಗ್ಗೆ ಸರ್ಕಾರದ ಆದೇಶ ಚಾಲಕ, ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಅಸೋಸಿಯೇಶನ್ ಮುಖಂಡರು ಗುರುವಾರ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.


ದಿನದ 24 ಗಂಟೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎನ್ನುವುದು ಸಂವಿಧಾನ ಬಾಹಿರ ಹಾಗೂ ಕಾರ್ಮಿಕ ಇಲಾಖೆಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರ ನಿಗದಿ ಪಡಿಸಿದ ದರ ಮತ್ತು ಅವಧಿ ಸಮಂಜಸವಾಗಿಲ್ಲ.


ವಾಹನಗಳ ಇಂಧನ, ಬಿಡಿ ಭಾಗಗಳು, ವಿಮೆ ಇನ್ನಿತರ ಖರ್ಚು ವೆಚ್ಚಗಳು ಗಗನಕ್ಕೇರಿದೆ. ವಾಹನ, ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸುವುದು ಅಸಾಧ್ಯವಾಗಿದೆ. ಸರ್ಕಾರ ಸ್ವ ಉದ್ಯೋಗಕ್ಕಾಗಿ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಿರಬಹುದು. ಆದರೆ ಆ ನೆಪದಲ್ಲಿ ಚಾಲಕ, ಮಾಲೀಕರು ಹಾಗೂ ವಾಹನದ ಮೇಲೆ ದಬ್ಬಾಳಿಕೆ ಸಮಂಜಸವಲ್ಲ.


ಎಪ್ರಿಲ್, ಮೇ ತಿಂಗಳಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿ ಟೂರಿಸ್ಟ್ ವಾಹನ ಚಾಲಕ ಮಾಲೀಕರಿಗೆ ಸ್ವಲ್ಪ ಮಟ್ಟಿನ ನಿರ್ವಹಣೆಯನ್ನು ಸುಧಾರಿಸುವ ಕಾಲವಾಗಿದ್ದು, ಈ ಸಂದರ್ಭದಲ್ಲೇ ಸರ್ಕಾರ ನಮಗೆ ನ್ಯಾಯಯುತ ದರ ನಿಗದಿಪಡಿಸದೆ ವಾಹನಗಳನ್ನು ಪಡೆಯುವುದು ಚಾಲಕ ವರ್ಗವನ್ನು ಅತೀವ ಸಂಕಷ್ಟಕ್ಕೆ ಒಳಪಡಿಸಿದಂತಾಗುತ್ತದೆ. ಈ ಎಲ್ಲ ಅಹವಾಲುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಶೀಘ್ರವಾಗಿ ನ್ಯಾಯಯುತ ಪರಿಹಾರ ಒದಗಿಸಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಪೊಲೀಸ್ ಆಯುಕ್ತರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಈ ಬಗ್ಗೆ ಯಥಾ ಪ್ರತಿ ಸಲ್ಲಿಸಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಎಂ., ಸಹ ಕಾರ್ಯದರ್ಶಿ ಶುಭಕರ ಶೆಟ್ಟಿ, ಲೋಕೇಶ್ ಕಶೆಕೋಡಿ, ಸಂಘಟಕಾ ಕಾರ್ಯದರ್ಶಿ ಸಂಜಯ ಕೋಟ್ಯಾನ್ ಎಕ್ಕೂರು, ಉಪಾಧ್ಯಕ್ಷ ಹರೀಶ್ ಶೆಟ್ಟಿ ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net