ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ಜಿಲ್ಲಾ ಸಮ್ಮೇಳನ

5 gkp 7
ಐದು ತಾಲೂಕುಗಳ ಚಾಲಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಚಾಲಕರನ್ನು ಸನ್ಮಾನಿಸಲಾಯಿತು.
Published on

ಗೋಣಿಕೊಪ್ಪಲು : ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್‌ನ ಕೊಡಗು ಜಿಲ್ಲಾ ಸಮ್ಮೇಳನ ಪೊನ್ನಂಪೇಟೆಯಲ್ಲಿ ಗುರುವಾರ ನಡೆಯಿತು.

ಜಿಲ್ಲಾ ಸಮ್ಮೇಳನದ ಅಂಗವಾಗಿ ಪೊನ್ನಂಪೇಟೆಯ ಕಾನೂರು ಜಂಕ್ಷನ್ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.

ಸಂಘದ ನೂರಾರು ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನಸೆಳೆದರು. ಬಳಿಕ ಮೆರವಣಿಗೆಯು ಸಮ್ಮೇಳನ ಆಯೋಜಿತ ಭಗವತಿ ಕನ್ವೆಷನ್ ಹಾಲ್ ಬಳಿ ಅಂತ್ಯಗೊಂಡಿತು. ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಅರುಣ್ ಕುಮಾರ್ ಸಮ್ಮೇಳನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಕೇರಳದ ಟ್ಯಾಕ್ಸಿ ಚಾಲಕರ ಸಂಘಟನೆಯಿಂದ ಪ್ರೇರಿತಗೊಂಡು 2014 ರಲ್ಲಿ ಕುಂದಾಪುರದಲ್ಲಿ 40 ಜನ ಸದಸ್ಯರನ್ನು ಒಳಗೊಂಡ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಇಂದು ಸುಮಾರು 6 ರಿಂದ 7 ಸಾವಿರ ಸಂಘದ ಸದಸ್ಯರಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿ ಟಿ.ಎಂ. ಕಾವೇರಿ ಮಾತನಾಡಿ, ಇಲಾಖೆ ವತಿಯಿಂದ ಕಾರ್ಮಿಕರಿಗೆ ದೊರೆಯುವ ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಚಾಲಕರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೇಂದು ಮನವಿ ಮಾಡಿದರು.

ರಾಜ್ಯಮಟ್ಟದ ಮಹಿಳಾ ಕರಾಟೆ ತರಬೇತುದಾರರಾದ ಶ್ರೀಜಾ ಸುನೀಲ್, ಕೊಡಗು ರೀಬಿಲ್ಡ್ ವ್ಯವಸ್ಥಾಪಕ ಕೆ.ಎ.ಕುಶಾಲಪ್ಪ, ಪಿಡಬ್ಲ್ಯೂಡಿ ಗುತ್ತಿಗೆದಾರ ಚೇರಂಡ ಮೋಹನ್, ವಿಘ್ನೇಶ್ವರ ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಪ್ಪ, ಕೆಟಿಡಿಪಿ ಜಿಲ್ಲಾಧ್ಯಕ್ಷ ಕಳ್ಳಿಚಂಡ ಪರಶುರಾಮ್, ಜಿಲ್ಲಾ ಉಪಾಧ್ಯಕ್ಷ ಬಿ.ಎಲ್.ತಿರುಪತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್.ಕಿರಣ್, ಇಕ್ಬಾಲ್ ಸದಸ್ಯರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net