ಟ್ಯಾಕ್ಸಿ ಚಾಲಕರು ಒಗ್ಗಟ್ಟು ಪ್ರದರ್ಶಿಸಬೇಕು

29 ckm 7
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದದಲ್ಲಿ ನೂತನ ಸಂಘದ ಲಾಂಛನ ಬಿಡುಗಡೆಗೊಳಿಸಲಾಯಿತು. ಎಚ್.ಕೆ.ಪ್ರಕಾಶ್ ಮೂಡಿಗೆರೆ, ಹಾಲಳ್ಳಿ ಮಂಡ್ಯ ರಾಜು , ಸಂಗಪ್ಪ ಅಮೀನಗಡ, ಅಶೋಕ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಟ್ಯಾಕ್ಸಿ ಚಾಲಕರು ಪರಸ್ಪರ ಒಗ್ಗಟ್ಟಿನಿಂದ ಒಂದಾಗಿ ಮುನ್ನೆಡೆದರೆ ಮಾತ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ಪ್ರಕಾಶ್ ಮೂಡಿಗೆರೆ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓರ್ವ ಟ್ಯಾಕ್ಸಿ ಚಾಲಕನಿಂದ ಸೌಲಭ್ಯಗಳು ಪಡೆಯಲು ಸ್ವಲ್ಪ ಸಂಕಷ್ಟ ಎದುರಾಗಲಿದೆ. ಅದೇ ವೇದಿಕೆ ಅಥವಾ ಸಂಘಟನೆ ಮೂಲಕ ತೆರಳಿ ಸರ್ಕಾರಕ್ಕೆ ಒತ್ತಾಯಿಸಿದರೆ ಖಂಡಿತ ಚಾಲಕರ ವೈಯಕ್ತಿಕ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಹಗಲು-ರಾತ್ರಿ ಎನ್ನದೇ ಚಾಲಕರು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಭದ್ರತೆ ದೊರಕಿಲ್ಲ. ಅಪಘಾತ ಅಥವಾ ಇನ್ಯಾವುದೇ ದುರ್ಘಟನೆ ನಡೆದರೆ ಚಾಲಕರ ಕುಟುಂಬವು ಬೀದಿಗೆ ಬೀಳಲಿದೆ. ಆದ್ದರಿಂದ ಇವುಗಳನ್ನು ತಪ್ಪಿಸುವ ಸಲುವಾಗಿ ಎಲ್ಲ ಚಾಲಕರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಹಾಲಳ್ಳಿ ಮಂಡ್ಯ ರಾಜು ಮಾತನಾಡಿ, ಚಾಲಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆ ಅತ್ಯವಶ್ಯಕ. ಈ ಮೂಲಕ ಸರ್ಕಾರ ಅಥವಾ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನಿಸಬಹುದು. ನ್ಯಾಯದೊರಕದಿದ್ದರೆ ಹೋರಾಟವನ್ನೂ ಮಾಡಬಹುದು. ಹಾಗಾಗಿ ಚಾಲಕರು ಭಿನ್ನಾಭಿಪ್ರಾಯ ತೊರೆದು ಒಗ್ಗಟ್ಟಿನ ಶಕ್ತಿ ತೋರ್ಪಡಿಸಬೇಕು ಎಂದರು.
ಚಾಲಕ ವೃತ್ತಿಯಲ್ಲಿ ಅಪಘಾತ ಸಂಭವಿಸಿ ಮೃತರಾದರೆ ಕಾರ್ಮಿಕ ಇಲಾಖೆ ಕೇವಲ ೫ ಲಕ್ಷ ರೂ. ನೀಡಿ ಕೈತೊಳೆದುಕೊಳ್ಳುತ್ತದೆ. ಅಂಗವೈಕಲ್ಯವಾದರೆ ೫೦-೬೦ ಸಾವಿರ ರೂಪಾಯಿ ಮಾತ್ರ ನೀಡಲಿದೆ. ಆದರೆ ಕಟ್ಟಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿರುವ ಕಾರಣ ಆ ಸೌಲಭ್ಯವನ್ನು ಚಾಲಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಚಾಲಕರು ಸಂಪೂರ್ಣ ದಾಖಲಾತಿ, ಸಮವಸ್ತç, ಸೀಟ್‌ಬೆಲ್ಟ್ ಧರಿಸಿದರೂ ಅಥವಾ ಟ್ರಾಫಿಕ್ ನಿಯಮಗಳನ್ನು ಪರಿಪಾಲಿಸಿದರೂ ಕೆಲವು ಟ್ರಾಫಿಕ್ ಅಧಿಕಾರಿಗಳಿಗೆ ದಂಡ ಕಟ್ಟುವುದು ತಪ್ಪುತ್ತಿಲ್ಲ. ಅಲ್ಲದೇ ಚಾಲಕರ ವೃತ್ತಿಯಲ್ಲಿರುವ ವ್ಯಕ್ತಿಯನ್ನು ಗೌರವಿಸುವುದು ತೀರಾ ವಿರಳವಾಗಿದೆ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಶ್ರಮಿಕ ಚಾಲಕರ ವೇದಿಕೆ ನೂತನ ರಾಜ್ಯ ಗೌರವ ಅಧ್ಯಕ್ಷರಾಗಿ ಹಾಲಳ್ಳಿ ಮಂಡ್ಯ ರಾಜು, ರಾಜ್ಯಾಧ್ಯಕ್ಷರಾಗಿ ಎಚ್.ಕೆ.ಪ್ರಕಾಶ್ ಮೂಡಿಗೆರೆ, ಉಪಾಧ್ಯಕ್ಷರಾಗಿ ಸಂಗಪ್ಪ ಅಮೀನಗಡ, ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಹ ಕಾರ್ಯದರ್ಶಿ ರಾಜಕುಮಾರ್, ಖಜಾಂಚಿಯಾಗಿ ಪಿ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ಹಿರಿಯ ನುರಿತ ವೈದ್ಯ ಡಾ.ರಾಮಾಚಣ ಅಡ್ಯಂತಾಯ, ಪೌರಕಾರ್ಮಿಕ ಹಿರಿಯ ಮಹಿಳೆ ಎಸ್.ನಾಗಮ್ಮ ಮತ್ತು ವಾಣಿಜ್ಯ ಬಳಕೆ ವಾಹನ ಸಲಹೆಗಾರ ಅಮರನಾಥ್ ಅವರನ್ನು ಗೌರವಿಸಲಾಯಿತು. ಬಳಿಕ ಟ್ಯಾಕ್ಸಿ ವೇದಿಕೆಯ ಲಾಂಛನ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಚಾಲಕರಾದ ಕೃಷ್ಣಮೂರ್ತಿ, ಸುನೀಲ್, ಗುರುಪ್ರಸಾದ್, ರಮೇಶ್ ಬೇಗಾರ್, ರಮೇಶ್, ರಾಹುಲ್, ರಾಜು, ಹುಚ್ಚಪ್ಪ ಕೋರೆ, ವೆಂಕಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net