

ಮಂಡ್ಯ: ನಗರಸಭೆ ಅವೈಜ್ಞಾನಿಕವಾಗಿ ಕಂದಾಯ ಹಾಗೂ ಘನ ತ್ಯಾಜ್ಯ ವಿಲೇವಾರಿ ಸುಂಕ ಮತ್ತು ಅನಧಿಕೃತ ಕಟ್ಟಡಗಳ ಕಂದಾಯವನ್ನು ಹೆಚ್ಚುವರಿ ಮಾಡಿರುವುದನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ನಿವೇಶನ ಮತ್ತು ಕಟ್ಟಡ ಆಸ್ತಿ ತೆರಿಗೆದಾರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ನಗರಸಭೆ ಕಚೇರಿಗೆ ತೆರಳಿದ ಒಕ್ಕೂಟದ ಪದಾಧಿಕಾರಿಗಳು ಶಾಸಕ ರವಿಕುಮಾರ್ ಗಣಿಗ ಹಾಗೂ ಪೌರಾಯುಕ್ತ ಮಂಜುನಾಥ್‌ಗೆ ಮನವಿ ಸಲ್ಲಿಸಿದರು. ಕಳೆದ 2 ವರ್ಷದಿಂದ ನಗರಸಭೆ ವ್ಯಾಪ್ತಿಯ ನಿವೇಶನ ಮತ್ತು ಕಟ್ಟಡದ ಆಸ್ತಿಯ ತೆರಿಗೆಯನ್ನು ಏಕಾಏಕಿಯಾಗಿ ಅವೈಜ್ಞಾನಿಕವಾಗಿ ಸಾವಿರಾರು ರೂ ಹೆಚ್ಚುವರಿಯಾಗಿ ಪಾವತಿಸುವಂತೆ ಮಾಲೀಕರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ. ಮಾತ್ರವಲ್ಲದೆ ಘನ ತ್ಯಾಜ್ಯ ವಿಲೇವಾರಿ ಮತ್ತು ಯುಜಿಡಿ ಸುಂಕವನ್ನು ಕೂಡ ಹಿಂದೆ ಇದ್ದ ದರಕ್ಕಿಂತ 10 ಪಟ್ಟು ಹೆಚ್ಚುವರಿ ವಸೂಲು ಮಾಡಲಾಗುತ್ತಿದೆ. ಮನೆ ಕಟ್ಟಲು ಅನುಮೋದನೆಗೆ ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಟ್ಟಡದಲ್ಲಿ ಅನಧಿಕೃತ 1 ಚದರವಿದ್ದರೆ, ಅಧಿಕೃತವಾಗಿರುವ 10 ಚದರದಡಿಗೂ ಎರಡು ಪಟ್ಟು ಕಂದಾಯವನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ. ಈ ಹಿಂದೆ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿರುವದಕ್ಕೆ ಮಾತ್ರ ಕಂದಾಯ ನಿಗದಿ ಮಾಡಲಾಗುತ್ತಿತ್ತು. ಇನ್ನು ನೀರಿನ ಕಂದಾಯವೂ ಸಹ ಅವೈಜ್ಞಾನಿಕವಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ನೀರಿನ ಕಂದಾಯಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿಗಳಾದ ಮಧು ಜಿ.ಮಾದೇಗೌಡ ಮತ್ತು ದಿನೇಶ್ ಗೂಳಿಗೌಡ ಕಡಿಮೆ ಮಾಡಿಸಿದ್ದರೂ ಪರಿಷ್ಕೃತ ದರ ಜಾರಿಗೆ ಬಂದಿಲ್ಲ. ಇನ್ನು 2000ಕ್ಕೂ ಹೆಚ್ಚು ನಿವೇಶನಗಳಿಗೆ ಸುಮಾರು 40 ವರ್ಷದ ಹಿಂದೆಯೇ ಕಿಮ್ಮತ್ತು ಪಾವತಿಸಿಕೊಂಡು ಎಂಡಾರ್ಸ್‌ಮೆಂಟ್ ಹಾಗೂ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿದ್ದರೂ ಇದುವರೆಗೂ ನಗರಸಭೆಯಿಂದ ಹಕ್ಕುಪತ್ರ ನೀಡದ ಜತೆಗೆ ಖಾತೆ ಮಾಡಿಲ್ಲವೆಂದು ಆಕ್ಷೇಪಿಸಿದರು.
ಆದ್ದರಿಂದ ಈ ಎಲ್ಲ ವಿಚಾರದ ಬಗ್ಗೆ ಪರಿಶೀಲಿಸಿ ದರಗಳನ್ನು ಪುನರ್ ಪರಿಷ್ಕರಿಸಬೇಕು. ಈ ಮೂಲಕ ನ್ಯಾಯಯುತವಾಗಿ ಕಂದಾಯವನ್ನು ನಿಗದಿಪಡಿಸಿ ಹಾಗೂ ನವ ಗಣಕೀಕೃತ ಇ ಸ್ವತ್ತು ನಮೂನೆ-3 ಮತ್ತು ಖಾತೆ ಮಾಡುವುದರಲ್ಲಿ ವಿಳಂಬವಾಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
ಒಕ್ಕೂಟದ ದೇವಯ್ಯ, ಪಾಪಣ್ಣ, ಉಮ್ಮಡಹಳ್ಳಿ ಸಿದ್ದರಾಜು, ಶಿವನಂಜು, ಶಿವಲಿಂಗಯ್ಯ ಇತರರಿದ್ದರು.