

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಸರ್ಕಾರದ 2024-25ನೇ ಸಾಲಿನ ಬಜೆಟ್ನಲ್ಲಿ ಹಲವು ಉತ್ತಮ ಅಂಶಗಳಿವೆ. ಮೇಲ್ನೋಟಕ್ಕೆ ಈ ಮುಂಗಡಪತ್ರವು ಸಪ್ಪೆ ಎನಿಸಿದರೂ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಕರದಾತರ ಸ್ನೇಹಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬೆಂಗಳೂರಿನ ಖ್ಯಾತ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ ಖಿಂಚಾ ಆಂಡ್ ಕಂಪನಿಯ ಪಾಲುದಾರ ನವೀನ ಖಾರಿವಾಲ್ ಹೇಳಿದರು.
ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಐಸಿಎಐ ಭವನದಲ್ಲಿ ಶನವಾರ ಆಯೋಜಿಸಿದ್ದ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಟ್ಯಾಕ್ಸ್ ಆಡಿಟ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ವರ್ಷ ಶೇ. 70ರಷ್ಟು ಅದಾಯ ತೆರಿಗೆ ಪಾವತಿದಾರರು ಹೊಸ ಟ್ಯಾಕ್ಸ್ ಸ್ಕೀಮ್ನ್ನು ಆಯ್ಕೆ ಮಾಡಿಕೊಂಡಿರುವುದು ಉಲ್ಲೇಖನೀಯವಾಗಿದೆ. ಕೇಂದ್ರ ಸರ್ಕಾರವು ಮುಂಬರುವ ವರ್ಷಗಳಲ್ಲಿ ಹಳೆಯ ಟ್ಯಾಕ್ಸ್ ಸ್ಕೀಮ್ ರದ್ದುಪಡಿಸುವ ಸಂಭವವಿರುತ್ತದೆ ಎಂದರು.
ಅಮೆರಿಕ, ವಿಯೆನ್ನಾ, ಇನ್ನಿತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆದಾಯ ತೆರಿಗೆ ದರಗಳು ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಭಾರತದಲ್ಲಿ ವಾರ್ಷಿಕ 15ಲಕ್ಷ ರೂ. ಆದಾಯ ಇರುವವರು ಹೊಸ ನಿಯಮಗಳ ಪ್ರಕಾರ 1.50 ಲಕ್ಷ ರೂ. ಆದಾಯ ತೆರಿಗೆ ಪಾವತಿ ಮಾಡುತ್ತಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ದರ ಕೆಳಮಟ್ಟದಲ್ಲಿ ಇರುವುದರಿಂದ ಹೊಸ ನಿಯಮಗಳ ಪ್ರಯೋಜನ ಪಡೆಯುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಲೆಕ್ಕ ಪರಿಶೋಧಕ ಆನಂದ ಪೋತ್ನಿಸ್ ಆದಾಯ ತೆರಿಗೆ ಕಾಯ್ದೆಯಡಿ ಟ್ಯಾಕ್ಸ್ ಆಡಿಟ್ ನಿಯಮಗಳ ಕುರಿತು ಮಾತನಾಡಿದರು. ಕೇಂದ್ರೀಯ ಪರಿಷತ್ ಸದಸ್ಯ ಶ್ರೀನಿವಾಸ್ ಖೋತಾ ಭವಿಷ್ಯದಲ್ಲಿ ಲೆಕ್ಕಪರಿಶೋಧಕರಿಗೆ ಲಭ್ಯವಿರುವ ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಐಸಿಎಐ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ್ ಮುನ್ನೊಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ವೃಷಭ ಉಪಾಧ್ಯಾಯ ವಂದಿಸಿದರು.