

ಹೊಸಕೋಟೆ: ಸುಂಕ ವಸೂಲಾತಿ ಕೇಂದ್ರಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಕಟ್ಟದೆ ವಂಚನೆ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜತೆಗೆ ಸುಂಕ ವಸೂಲಾತಿ ಕೇಂದ್ರದ ಅಕ್ಕಪಕ್ಕದಲ್ಲಿರುವ ಬೃಹತ್ ವಾಣಿಜ್ಯ ಕಟ್ಟಡಗಳೂ ಕಟ್ಟಬೇಕಾದ ತೆರಿಗೆ ಕಟ್ಟುತ್ತಿಲ್ಲ ಮತ್ತು ವಾಣಿಜ್ಯ ಚಟುವಟಿಕೆಗೆ ಅನುಮತಿ ಪಡೆಯದೇ ಪ್ರತಿ ದಿನ ಲಕ್ಷಾಂತರ ರೂ. ವಹಿವಾಟಿನೊಂದಿಗೆ ಲಾಭ ಮಾಡಿಕೊಳ್ಳುತ್ತಿವೆ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಲಾನುಭವಿಗಳಾಗಿದ್ದಾರೆ..!
ಇಂಥಹದ್ದೊಂದು ಅನುಮಾನ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು ಕಣ್ಣ ಮುಂದೆಯೇ ಲಕ್ಷಾಂತರ ರೂ.ತೆರಿಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದೆ ಎಂಬ ಮಾತು ಹರಿದಾಡುತ್ತಿದೆ.
ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75 ರ ಸುಂಕ ವಸೂಲಾತಿ ಕೇಂದ್ರ ನಗರದ ಹೊರವಲಯದಲ್ಲಿರುವ ತಾಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದೆ, ಆ ವ್ಯಾಪ್ತಿಯಲ್ಲಿ ಕಲ್ಯಾಣಿ ಸುಂಕ ವಸೂಲಾತಿ ಕೇಂದ್ರ ದಿನದ 24 ಗಂಟೆ ಸುಂಕ ವಸೂಲಿ ಮಾಡುವ ಕಾರ್ಯ ನಿರ್ವಹಣೆ ಮಾಡುತ್ತಿದೆ, ಸಾವಿರಾರು ವಾಹನಗಳಿಂದ ಕೋಟ್ಯಂತರ ರೂಪಾಯಿ ಸುಂಕ ವಸೂಲಾತಿ ಮಾಡುತ್ತಿದ್ದು ಗ್ರಾಮ ಪಂಚಾಯತಿಗೆ ಕಟ್ಟ ಬೇಕಾದ ತೆರಿಗೆಯನ್ನು ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದೆ.
ಅಧಿಕಾರಿಗಳು ಜಾಣಮೌನ: ಈಗಾಗಲೇ ಸುಂಕ ವಸೂಲಾತಿ ಕೇಂದ್ರದ ಅಕ್ಕ ಪಕ್ಕದಲ್ಲಿ ವಿವಿಧ ಬಗೆಯ ಬೃಹತ್ ಹೋಟಲ್‌ಗಳು, ಬಟ್ಟೆ ಮಾರಾಟ ಶೋರೂಂಗಳು, ಕಾರ್ ಬೈಕ್ ಶೋರೂಂಗಳು, ಖಾಸಗಿ ಆಸ್ಪತ್ರೆ ಹೀಗೆ ಹಲವಾರು ವಾಣಿಜ್ಯ ಚಟುವಟಿಕೆಯ ಹಲವು ಕಟ್ಟಡಗಳು ತಲೆ ಎತ್ತಿವೆ. ಈ ಬಗ್ಗೆ ಯಾವೊಬ್ಬ ಅಧಿಕಾರಿ ಕ್ರಮ ಕೈಗೊಳ್ಳದೆ ಇರುವುದು ಅನುಮಾನ ಮೂಡಿಸಿದ್ದು ವಾಣಿಜ್ಯ ಕಟ್ಟಡದ ತೆರಿಗೆ ಹಣವನ್ನು ಅನಧಿಕೃತವಾಗಿ ಲಂಚದ ರೂಪದಲ್ಲಿ ಅಧಿಕಾರಿಗಳು ತಮ್ಮ ಜೇಬಿಗೆ ತುಂಬಿಸಿಕೊಳ್ಳುತಿದ್ದಾರೆ ಎಂಬ ಸಾರ್ವಜನಿಕ ದೂರುಗಳು ಕೇಳಿ ಬರುತ್ತಿದೆ.
ವಾಹನದಟ್ಟಣೆ: ಈ ಭಾಗದ ವಾಣಿಜ್ಯ ಕಟ್ಟಡಗಳು ಪರವಾನಿಗೆ ಇಲ್ಲದೆ ಬೇಕಾಬಿಟ್ಟಿ ನಿರ್ಮಾಣ ಮಾಡಿಕೊಂಡಿರುವ ಕಾರಣ ಹೋಟಲ್, ಕಾರ್, ಬೈಕ್, ಬಟ್ಟೆ ಹಾಗೂ ಇನ್ನಿತರ ಶೋರೂಂಗೆ ಬರುವ ಗ್ರಾಹಕರ ವಾಹನಗಳನ್ನು ಹೆದ್ದಾರಿ ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದ್ದು ವಾಹನ ಸಂಚಾರಕ್ಕೂ ಹೆಚ್ಚು ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಅಡ್ಜೆಸ್ಟ್‌ಮೆಂಟ್ ವ್ಯವಹಾರ:
ಪಂಚಾಯತಿ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ, ವಾಣಿಜ್ಯ ಚಟುವಟಿಕೆ ಪ್ರಾರಂಭಕ್ಕೆ ಅನುಮತಿ ಕೋರಿ ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಆರ್ಜಿ ಸಲ್ಲಿಸಿದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಗಳು ಬೇಕಾಬಿಟ್ಟಿ ದಾಖಲೆಗಳ ಬೇಡಿಕೆ ಇಡುತ್ತಾರೆ, ಇಲ್ಲದಿದ್ದರೆ ಲಂಚಕ್ಕೆ ಬೇಡಿಕೆ ಇಡುತ್ತಾರೆ, ಇದರ ಬದಲು ಸರ್ಕಾರಿ ಪ್ರಕ್ರಿಯೆಯನ್ನು ಗಾಳಿಗೆ ತೂರಿ ವಾಣಿಜ್ಯ ಕಟ್ಟಡಗಳಲ್ಲಿ ವ್ಯವಹಾರ ಮಾಡಿಕೊಂಡು ಪ್ರತಿ ತಿಂಗಳು ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ನಿಯಮಿತ ಲಂಚ ನೀಡುವುದು ಹಾಗೂ ರಾಜಕೀಯ ಪ್ರಭಾವ ಬೀರಿ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗದಂತೆ ವ್ಯವಹಾರ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.