

ಬೆಳಗಾವಿ: ಆರ್ಥಿಕ ಕೊರತೆ, ಆದಾಯ ಸೋರಿಕೆ ಸೇರಿ ವಿವಿಧ ಸಮಸ್ಯೆಗಳಿಂದ ತತ್ತರಿಸಿರುವ ಮಹಾನಗರ ಪಾಲಿಕೆಗೆ ಇದೀಗ ಕರೊನಾ ವೈರಸ್ ಮತ್ತೊಂದು ಶಾಕ್ ನೀಡಿದ್ದು, 2019-20ನೇ ಸಾಲಿನ 5.8 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಉಳಿದಿದೆ.
ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಕರೊನಾ ವೈರಸ್ ತಡೆಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಮಾ. 15ರಿಂದ ವಿವಿಧ ರೀತಿಯ ತೆರಿಗೆ ವಸೂಲಿ ಕಾರ್ಯ ಅರ್ಧದಲ್ಲಿಯೇ ಮೊಟಕುಗೊಂಡಿದೆ.
ಮಾ. 31ರ ಒಳಗೆ ವಸೂಲಿಯಾಗಬೇಕಿದ್ದ 5.8 ಕೋಟಿ ರೂ. ಬಾಕಿ ಉಳಿದುಕೊಂಡಿದೆ.
ಪಾಲಿಕೆಯು 1.32 ಲಕ್ಷ ಆಸ್ತಿಗಳಿಂದ 2019-20ನೇ ಸಾಲಿನಲ್ಲಿ 40 ಕೋಟಿ ರೂ. ಆದಾಯ ಸಂಗ್ರಹ ಗುರಿ ಹಾಕಿಕೊಂಡಿತ್ತು. ಆದರೆ, 2019ರಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಬಳ್ಳಾರಿ ನಾಲಾ ಪ್ರವಾಹ, ಪ್ರಸ್ತುತ ಕರೊನಾ ಎಫೆಕ್ಟ್‌ನಿಂದ ತೆರಿಗೆ ವಸೂಲಿಗೆ ಹೊಡೆತ ಬಿದ್ದಿದೆ. ಮಾ. 31ಕ್ಕೆ ಆರ್ಥಿಕ ವರ್ಷ ಪೂರ್ಣಗೊಂಡಿದ್ದರೂ ಶೇ.15 ರಿಂದ 20ರಷ್ಟು ತೆರಿಗೆ ವಸೂಲಿ ಬಾಕಿ ಉಳಿದಿದೆ.
ಲಾಕ್‌ಡೌನ್‌ನಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ಆನ್‌ಲೈನ್ ಸೌಲಭ್ಯ ಕಲ್ಪಿಸಿದರೂ ತೆರಿಗೆ ಕಟ್ಟಿಲ್ಲ. ಬಾಕಿ ಉಳಿಸಿಕೊಂಡವರು ಕರೊನಾ ನೆಪ ಹೇಳುತ್ತಿದ್ದಾರೆ. ಅವರಿಗೆ ಕಾಲಾವಕಾಶ ನೀಡಬೇಕಾ ಅಥವಾ ವಸೂಲಿ ಮಾಡಬೇಕಾ ಎಂಬ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಪ್ರತಿವರ್ಷ ವಿವಿಧ ಕಾರಣಗಳಿಂದ ತೆರಿಗೆ ವಸೂಲಾತಿಯಲ್ಲಿ 4 ರಿಂದ 5 ಕೋಟಿ ರೂ. ವರೆಗೆ ಬಾಕಿ ಉಳಿಯುತ್ತಿದೆ. ಕೆಲವು ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು ಅವುಗಳ ಹೊಸ ಬಾಡಿಗೆ ದರ ನಿಗದಿಪಡಿಸುವ ಕೆಲಸ ಬಾಕಿ ಉಳಿದಿದೆ. ಪಾಲಿಕೆಯಲ್ಲಿ ಆದಾಯಕ್ಕಿಂತ ಖರ್ಚು-ವೆಚ್ಚಗಳು ಜಾಸ್ತಿಯಾಗುತ್ತಿದ್ದು, ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿರುವುದು ನಿಜ. ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಯೇ ಆನ್‌ಲೈನ್ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಏ. 1 ರಿಂದ 4ರ ವರೆಗೆ 16.22 ಲಕ್ಷ ರೂ. ಟ್ಯಾಕ್ಸ್ ವಸೂಲಾಗಿದೆ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡ ತೆರಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ಎಲ್ಲ ವಿಭಾಗದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕರೊನಾ ನಿಯಂತ್ರಣ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದ್ದರಿಂದ ತೆರಿಗೆ ವಸೂಲಿ ಸಾಧ್ಯವಾಗಿಲ್ಲ. ಲಾಕ್‌ಡೌನ್‌ನಿಂದ ವ್ಯಾಪಾರ -ವಹಿವಾಟು ಸ್ಥಗಿತಗೊಂಡಿದೆ. ಬಾಕಿ ವಸೂಲಿ ಕಷ್ಟವಾಗುತ್ತಿದೆ.| ಎಸ್.ಬಿ. ದೊಡ್ಡಗೌಡರ ಉಪ ಆಯುಕ್ತ (ಕಂದಾಯ ) ಪಾಲಿಕೆ, ಬೆಳಗಾವಿಲಾಕ್‌ಡೌನ್‌ನಿಂದ ತೆರಿಗೆ ವಸೂಲಿಗೆ ಅಡ್ಡಿಯಾಗಿದೆ. ಕೆಲವರು ಆನ್‌ಲೈನ್ ಮೂಲಕ ತೆರಿಗೆ ಪಾವತಿಸುತ್ತಿದ್ದಾರೆ. ಕರೊನಾ ತಡೆಗಟ್ಟುವ ಕಾರ್ಯಾಚರಣೆಯಲ್ಲಿ ಭಾಗವಹಿಸುವುದರಿಂದ ತೆರಿಗೆ ಸಂಗ್ರಹದ ಬಗ್ಗೆ ಗಮನ ಹರಿಸಲು ಸಾಧ್ಯವಾಗಿಲ್ಲ.| ಕೆ.ಎಚ್. ಜಗದೀಶ, ಮಹಾನಗರ ಪಾಲಿಕೆ ಆಯುಕ್ತ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ