ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಲು ತೆರಿಗೆ ಹೊರೆಯು ಕಡಿಮೆಯಾಗಬೇಕು

9cbp2
Published on

ಚಿಕ್ಕಬಳ್ಳಾಪುರ: ಮಧ್ಯಮ ವರ್ಗದವರು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳಲು ತೆರಿಗೆಯ ಹೊರೆಯು ಕಡಿಮೆಯಾಗಬೇಕು ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ನಗರದಲ್ಲಿನ ಖಾಸಗಿ ಹೋಟೆಲೊಂದರಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಗುರುವಾರ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆ ಎಂಎಸ್ ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ರಫ್ತು ಉತ್ತೇಜಿಸುವ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯಮವರ್ಗದವರು, ಮಧ್ಯಮವರ್ಗದವರಿಗಿಂತಲೂ ಕಡಿಮೆ ಆರ್ಥಿಕ ಆದಾಯ ಹೊಂದಿರುವವರು ಪ್ರಾರಂಭಿಸುವ ಮತ್ತು ನಡೆಸುವ ಉದ್ದಿಮೆಗಳು, ಕೈಗಾರಿಕೆಗಳಿಗೆ ವಿಧಿಸುವ ತೆರಿಗೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತಷ್ಟು ಉತ್ತೇಜನಾಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂರ್ದಭದಲ್ಲಿ ಸರ್. ಎಂ.ವಿ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಆರ್.ಗೋವಿಂದರಾಜು, ವಿ.ಟಿ.ಪಿ.ಸಿ ಸಹಾಯಕ ನಿರ್ದೇಶಕ ಎಲ್.ಜೈದೀಪ್, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜ ಗೋಪಾಲ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಸತೀಶ್, ಉಪಾಧ್ಯಕ್ಷ ಬಿ .ಆರ್ ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್.ಸಾಗರ್, ನಗರ ಜಂಟಿ ಕಾರ್ಯದರ್ಶಿ ಜೆ.ಎಸ್ ಬಾಬು, ಖಜಾಂಚಿ ಎಚ್.ಮಂಜುನಾಥ್, ಜಿಲ್ಲಾಭಿವೃದ್ಧಿ ಉಪಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಲೀಡ್ ಬ್ಯಾಂಕ್ ನ ಮುಖ್ಯಸ್ಥ ನಾಗರಾಜು ಮತ್ತಿತರರು ಇದ್ದರು.

*ಮಹತ್ವದ ವಿಚಾರಗಳು

ಕಾರ್ಯಾಗಾರದಲ್ಲಿ ಸರ್.ಎಂ.ವಿ ಕೈಗಾರಿಕಾ ಸಂಘದ ಸದ್ಯಸರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉದ್ಯಮಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಕೈಗಾರಿಕೆಗಳ ಅಭಿವೃದ್ಧಿ ಅಗತ್ಯತೆ, ಉದ್ದಿಮೆಗಳಲ್ಲಿ ಮಾರುಕಟ್ಟೆ ಅರಿವು, ಸರ್ಕಾರದ ಕೈಗಾರಿಕಾ ಯೋಜನೆಗಳು ಮತ್ತು ಪ್ರೋತ್ಸಾಹ, ಕೈಗಾರಿಕಾ ಉದ್ಯಮಿಗಳಿಗೆ ಸಾಲ ಸೌಲಭ್ಯ, ಸರ್ಕಾರದ ಮೂಲ ಸೌಕರ್ಯಗಳ ಬಳಕೆ, ಜಾಗತಿಕ ಮಟ್ಟದಲ್ಲಿ ಭಾರತ ರಫ್ತು ಪ್ರಮಾಣ ಹೆಚ್ಚಿಸುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

*ವರ್ಷಕ್ಕೆ 323 ಕೋಟಿ ರೂ

ಜಿಲ್ಲೆಯಲ್ಲಿನ ಕೈಗಾರಿಕಾ ವಲಯದಲ್ಲಿ ಒಂದು ವರ್ಷಕ್ಕೆ 323 ಕೋಟಿ ರೂ ವಹಿವಾಟು ನಡೆಯುತ್ತಿದ್ದು ಸರ್ಕಾರದಿಂದ ಉದ್ದಿಮೆದಾರರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು ಇದಕ್ಕೆ ಅನುಗುಣವಾಗಿ ಉದ್ದಿಮೆದಾರರು ವಸ್ತುವಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಒಳ್ಳೆಯ ಬೇಡಿಕೆ ಇರುತ್ತದೆ. ಯುವ ಸಮುದಾಯ ಉದ್ಯೋಗಕ್ಕಾಗಿ ಹಂಬಲಿಸುವ ಬದಲಾಗಿ ಕೆಲಸ ನೀಡುವ ಉದ್ದಿಮೆದಾರರಾಗಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಮಾಹಿತಿಯನ್ನು ಪಡೆಯಲು ಕೈಗಾರಿಕಾ ಇಲಾಖೆಯ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದು ಇಲ್ಲವೇ ಸರ್ಕಾರದ ವೆಬ್ ಸೈಟ್ ಗಳಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎನ್ ವೀರಭದ್ರಸ್ವಾಮಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net