2 ಲಕ್ಷ ಸ್ವತ್ತುಗಳಿಂದ ತೆರಿಗೆ ಬಾಕಿ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

bbmp office
Published on

ಬೆಂಗಳೂರು: ನಗರದಲ್ಲಿ ಆಸ್ತಿ ತೆರಿಗೆ ಪಾವತಿಸದ 2 ಲಕ್ಷ ಸ್ವತ್ತುಗಳಿದ್ದು, ಈ ಪೈಕಿ ಹೆಚ್ಚಿನವು ವಾಣಿಜ್ಯ ಕಟ್ಟಡಗಳೇ ಆಗಿವೆ. ಹಾಗಾಗಿ ಇಂತಹ ಬಿಲ್ಡಿಂಗ್ ಮಾಲೀಕರಿಂದ ಬಾಕಿ ವಸೂಲಿ ಆಗದಿದ್ದಲ್ಲಿ ಕಟ್ಟಡಗಳನ್ನು ಸೀಜ್ ಮಾಡಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಈಗಾಗಲೇ ಒಟಿಎಸ್ ಗಡುವು ಮುಗಿದಿದೆ. ಒಂದಕ್ಕಿಂತ ಹೆಚ್ಚು ಬಾರಿ ನೋಟಿಸ್ ನೀಡಲಾಗಿದೆ. ಜತೆಗೆ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನೂ ರವಾನಿಸಲಾಗಿದೆ. ಆದರೂ, ನೋಟಿಸ್‌ಗಳಿಗೆ ಕ್ಯಾರೇ ಎನ್ನದ ಸ್ವತ್ತುದಾರರಿಂದ ಬಾಕಿ ವಸೂಲು ಮಾಡಲು ಎಲ್ಲ ವಲಯಗಳಲ್ಲಿ ತಲಾ ಹತ್ತು ಮಂದಿ ಸಿಬ್ಬಂದಿ ಒಳಗೊಂಡ ಹಲವು ತಂಡಗಳನ್ನು ರಚಿಸಿ ಬಾಕಿ ವಸೂಲಿ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ಬುಧವಾರ ಸ್ಪಷ್ಟಪಡಿಸಿದರು.

ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರಿಂದ ಇನ್ನೂ 300 ಕೋಟಿ ರೂ. ವಸೂಲಾಗಬೇಕಿದೆ. ಈ ವರ್ಷದ ಮೊದಲ ದಿನದಿಂದ ಈವರೆಗೆ 240 ಕಟ್ಟಡಗಳನ್ನು ಸೀಜ್ ಮಾಡಲಾಗಿದೆ. ಈ ಕಾರ್ಯ ಮುಂದುವರಿಯಲಿದ್ದು, ವಾಸದ ಕಟ್ಟಡಗಳಿಗೆ ಬೀಗ ಹಾಕುವ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

7 ಲಕ್ಷ ಸ್ವತ್ತುಗಳಿಗಿಲ್ಲ ಖಾತಾ:

ಪಾಲಿಕೆ ವ್ಯಾಪ್ತಿಯಲ್ಲಿ ಏಳು ಲಕ್ಷ ಸ್ವತ್ತುಗಳಿಗೆ ಖಾತಾ ದಾಖಲೆಪತ್ರವೇ ಇಲ್ಲ. ಈ ದಾಖಲೆ ಇಲ್ಲದೆ ಅಂತಹ ಬಿಲ್ಡಿಂಗ್‌ಗಳಿಂದ ತೆರಿಗೆ ವಸೂಲು ಮಾಡುವುದು ಕಷ್ಟವಾಗುತ್ತಿದೆ. ಇವುಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಖಾತಾ ನೀಡುವ ಬಗ್ಗೆ ಕಂದಾಯ ನಿಯಮಾವಳಿ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಖಾತೆ ನೀಡುವ ಮುನ್ನ ಹಿಂಬಾಕಿ ಭರಿಸಿಕೊಂಡೇ ಹೊಸದಾಗಿ ದಾಖಲೆಪತ್ರ ಒದಗಿಸಲಾಗುವುದು. ಈ ಬಗ್ಗೆ ಇನ್ನಷ್ಟು ನಿಯಮಗಳನ್ನು ಪರಾಮರ್ಶಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ನಗರದಲ್ಲಿರುವ ಎಲ್ಲ 23 ಲಕ್ಷ ಸ್ವತ್ತುಗಳಿಗೆ ಇ-ಖಾತಾ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಕರಡು ಪ್ರತಿ ಡೌನ್‌ಲೋಡ್ ಮಾಡಿಕೊಂಡಿರುವವರಿಗೆ ದಾಖಲಾತಿ ಪರಾಮರ್ಶಿಸಿ ಕಾಲಮಿತಿಯೊಳಗೆ ಸೌಲಭ್ಯ ಒದಗಿಸಲಾಗುವುದು. ಇ-ಖಾತಾ ವಿತರಿಸಲು ಡೆಡ್‌ಲೈನ್ ಇಲ್ಲವಾದರೂ, ನಾಗರಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ಟನಲ್ ವರದಿಯಲ್ಲಿ ಲೋಪ ಆಗಿಲ್ಲ:

ಸುರಂಗ ಯೋಜನೆ ಅಡಿಯಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ಜಾರಿ ಸಂಬಂಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಾಲ ನೀಡುವ ಸಂಸ್ಥೆಗಳಿಗೆ ಯೋಜನೆಯ ಡಿಪಿಆರ್ ಮಾಹಿತಿ ಪ್ರತಿ ನೀಡಬೇಕಿದೆ. ಇದನ್ನು ಸಿದ್ಧಪಡಿಸಿರುವ ಖಾಸಗಿ ಕಂಪನಿ ಒಂದು ಪುಟದಲ್ಲಿ ತಪ್ಪು ಮಾಹಿತಿಯನ್ನು ಸಲ್ಲಿಸಿದೆ. ಇದಕ್ಕಾಗಿ ಆ ಕಂಪನಿ ಕ್ಷಮೆಯಾಚಿಸಿದೆ. ಇದಕ್ಕಾಗಿ ಶಿಸ್ತುಕ್ರಮ ಕೈಗೊಳ್ಳಬೇಕೆ ಎಂಬುದನ್ನು ಇನ್ನಷ್ಟೇ ವಿಚಾರ ಮಾಡಬೇಕಿದೆ. ಆದರೆ, ಈ ತಪ್ಪನ್ನೇ ವರದಿ ಸಿದ್ಧಪಡಿಸುವ ವೇಳೆ ಮಾಹಿತಿಯನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಲಾಗಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net