ಕಲ್ಲಂಗಡಿ ಬೆಳೆಗೆ ಕರಡಿ ಕಾಟ, ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

08122020 Tavaragera bear loss crop
Published on

ತಾವರಗೇರಾ: ಸಮೀಪದ ಮೆಣೇಧಾಳ ವ್ಯಾಪ್ತಿಯಲ್ಲಿ ಮೆಕ್ಕೆಜೋಳ, ಕಲ್ಲಂಗಡಿ ಬೆಳೆಗೆ ಕರಡಿ ಕಾಟ ಎದುರಾಗಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ.

ಮೆಣೇಧಾಳದ ರೈತ ಮಹಾಂತೇಶ ಐಲಿ ಅವರ ಜಮೀನು ಗುಡ್ಡಕ್ಕೆ ಹೊಂದಿಕೊಂಡಿದ್ದು, 7 ಎಕರೆ ಜಮೀನಿನಲ್ಲಿ 3 ಲಕ್ಷ ರೂ ಖರ್ಚು ಮಾಡಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಸದ್ಯ ಕಲ್ಲಂಗಡಿ ಹಣ್ಣು ಬಿಟ್ಟಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಕರಡಿ ದಾಳಿಯಿಂದಾಗಿ ಚಿಂತೆಗೀಡಾಗುವಂತೆ ಮಾಡಿದೆ.

ಕಳೆದ ಒಂದು ತಿಂಗಳಿಂದ ಕರಡಿಗಳು ದಾಳಿ ನಡೆಸಿ ಬೆಳೆ ಹಾಳು ಮಾಡುತ್ತಿವೆ. ಪಕ್ಕದ ಜಮೀನಿನಲ್ಲಿ ಲಕ್ಷ್ಮಣ ಬಡಿಗೇರ ಎಂಬುವರು ಪಪ್ಪಾಯಿ ಬೆಳೆದಿದ್ದು, ಅದಕ್ಕೂ ಕರಡಿ ಕಾಟ ಎದುರಾಗಿದೆ. ರೈತ ಶರಣಪ್ಪ ಎಂಬುವರ ಮೆಕ್ಕೆ ಜೋಳದ ಬೆಳೆಯನ್ನೂ ಸಹ ಹಾಳು ಮಾಡಿವೆ.

ಸಾಲ ಮಾಡಿ ಬೆಳೆ ಬೆಳೆದಿದ್ದು, ಕರಡಿ ದಾಳಿಯಿಂದಾಗಿ ಮತ್ತಷ್ಟು ಸಾಲ ಮಾಡುವಂತಾಗಿದೆ. ಜಮೀನಿಗೆ ಹೊಂದಿಕೊಂಡಿರುವ ಗಾಣಗಿತ್ತಿ ಗುಡ್ಡದಲ್ಲಿ ಕರಡಿ ವಾಸವಾಗಿರುವ ಬಗ್ಗೆ ಅರಣ್ಯ ಇಲಾಖೆಯವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರಾದ ಮಹಾಂತೇಶ ಐಲಿ, ಲಕ್ಷ್ಮಣ ಬಡಿಗೇರ್, ಶರಣಪ್ಪ ದುಮತಿ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net