ತಾವರಕಟ್ಟೆ ಮಹದೇಶ್ವರ ಜಾತ್ರೆ ಸಂಭ್ರಮ

27-FEB-GPT-2A
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯದೊಳಗಿರುವ ತಾವರಕಟ್ಟೆ ಮಹದೇಶ್ವರ ಜಾತ್ರೆ ಗುರುವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಸಾವಿರಾರು ಭಕ್ತರನ್ನು ದೇವಾಲಯಕ್ಕೆ ಕರೆದೊಯ್ಯಬೇಕಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಸಫಾರಿ ರದ್ದುಗೊಳಿಸಿತ್ತು.

ಹುಲಿ ಯೋಜನೆಯ ಬಂಡೀಪುರ ಸಫಾರಿ ವಲಯದ ಅರಣ್ಯ ಪ್ರದೇಶದಲ್ಲಿರುವ ತಾವರೆಕಟ್ಟೆ ಮಹದೇಶ್ವರಸ್ವಾಮಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಹಾಗೂ ಆದಿವಾಸಿಗಳ ಆರಾಧ್ಯ ದೈವವಾಗಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ಮರುದಿನ ಬಂಡೀಪುರ ವಲಯದ ಅರಣ್ಯ ಪ್ರದೇಶದೊಳಗೆ ಇರುವ ತಾವರಗಟ್ಟೆ ಮಹದೇಶ್ವರ ದೇವಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಸಡಗರದಿಂದ ಪಾಲ್ಗೊಳ್ಳುತ್ತಾರೆ.

ಹಿಂದೆ ಪ್ರತಿ ಸೋಮವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ನಂತರ ಸಾರ್ವಜನಿಕರ ಮುಕ್ತ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ಮರು ದಿನ ಜಾತ್ರೆ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಲಿದೆ.

ಜಾತ್ರೆಗೆ ಬರುವ ಭಕ್ತರು ಹಾಗೂ ಆದಿವಾಸಿಗಳನ್ನು ದೇವಾಲಯಕ್ಕೆ ಕರೆದೊಯ್ದು ನಂತರ ಹೊರಗೆ ಕರೆತರಲು ವಾಹನಗಳ ವ್ಯವಸ್ಥೆ ಜತೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಿತ್ತು. ಬಂಡೀಪುರ ಹಾಗೂ ನೆರೆಯ ತಮಿಳುನಾಡು ಮುಂತಾದ ಕಡೆಗಳಲ್ಲಿ ನೆಲೆಸಿರುವ ಆದಿವಾಸಿಗಳು ಬಂದು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಸಾಮೂಹಿಕವಾಗಿ ನರ್ತಿಸುವ ಮೂಲಕ ಮಾದಪ್ಪನ ಸೇವೆ ಸಲ್ಲಿಸಿದರು.

ಈ ಮೂಲಕ ಬೇಸಿಗೆ ಸಂದರ್ಭದಲ್ಲಿ ಕಾಡಿಗೆ ಆಕಸ್ಮಿಕವಾಗಿ ಬೆಂಕಿಬಿದ್ದರೆ ಕಾಡಂಚಿನ ಜನರು ಹಾಗೂ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಸುಮಾರು 5 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ಗುರುವಾರ ಸಫಾರಿ ರದ್ದುಗೊಳಿಸಲಾಗಿತ್ತು ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net