

ತಾವರಗೇರಾ: ಮಣ್ಣೆತ್ತಿನ ಅಮಾವಾಸ್ಯೆಯನ್ನು ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ರೈತರಾದಿಯಾಗಿ ಎಲ್ಲ ಮನೆಗಳಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಜಗಲಿಯ ಮೇಲಿಟ್ಟು ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಕುಂಬಾರ ಸಮುದಾಯದವರು ಕುಲಕಸುಬು ಮಡಕೆ ಮಾಡುವ ಜತೆಗೆ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ 15-20 ದಿನ ಮುಂಚೆಯೇ ಕಪ್ಪು ಮಿಶ್ರಿತ ಜೇಡಿ ಮಣ್ಣಿನ ಎತ್ತುಗಳನ್ನು ತಯಾರಿ ಮಾರಾಟಕ್ಕೆ ಇಟ್ಟಿದ್ದರು. ಇವುಗಳ ಜತೆಗೆ ಮಾರುಕಟ್ಟೆಯಲ್ಲಿ ಪಿಒಪಿ ಎತ್ತುಗಳ ಮಾರಾಟವೂ ಜೋರಾಗಿತ್ತು. ಎತ್ತುಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿತ್ತು. ಬಣ್ಣ ಲೇಪಿತ ಮತ್ತು ಬಣ್ಣವಿಲ್ಲದ ಮಣ್ಣಿನ ಎತ್ತುಗಳು ಮಾರಾಟಕ್ಕೆ ಲಭ್ಯವಿದ್ದವು. ಕೆಲ ವ್ಯಾಪಾರಿಗಳು ಮಹಾರಾಷ್ಟ್ರದಿಂದ ಮಣ್ಣಿನ ಎತ್ತುಗಳು ತಂದು 70 -100 ರೂ.ಗೆ ಜತೆಯಂತೆ ಮಾರಾಟ ಮಾಡಿದರು. ಸ್ಥಳೀಯವಾಗಿ ತಯಾರಿಸಿದ ಮಣ್ಣಿನ ಎತ್ತುಗಳು 60 ರೂ. ಪಿಒಪಿ ಎತ್ತುಗಳು 60 ರಿಂದ 80 ರೂ. ವರೆಗೆ ಮಾರಾಟವಾದವು.