

ತಾವರಗೇರಾ: ಪಟ್ಟಣದ ಸಿದ್ಧಾರೂಢ ಮಠದಲ್ಲಿ ಕುಮಾರ ಸಿದ್ಧಾರೂಢ ಸ್ವಾಮೀಜಿ ಅವರ ಪಟ್ಟಾಭಿಷೇಕ ಫೆ.18ರಂದು ನಡೆಯಲಿದೆ.
ಪಟ್ಟಾಭಿಷೇಕದ ಅಂಗವಾಗಿ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಫೆ.10ರಿಂದ ಒಂದು ವಾರದವರೆಗೆ ಸಿದ್ಧಾರೂಢರ ಕಥಾಮೃತ ಪ್ರವಚನ ನಡೆಯಲಿದೆ. ಇಳಕಲ್‌ನ ಅನ್ನದಾನ ಶಾಸ್ತ್ರೀಗಳು ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗಮೇಶ ಹಾರ್ಮೋನಿಯಂ, ತೊಟೇಂದ್ರ ಕರಡಕಲ್ ತಬಲಾ ಸಾತ್ ನೀಡಲಿದ್ದಾರೆ.
ಫೆ.18ರಂದು ಬ್ರಾಹ್ಮಿ ಮುಹೂರ್ತದಲ್ಲಿ ಕುಮಾರ ಸಿದ್ಧಾರೂಢ ಸ್ವಾಮೀಜಿ ಅವರ ಪಟ್ಟಾಭಿಷೇಕ ನಡೆಯಲಿದೆ. ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸದ್ಗುರು ಸಿದ್ಧಾರೂಢ ಸ್ವಾಮೀಜಿ ಅವರು ನೂತನ ಶ್ರೀಗಳಿಗೆ ಬ್ರಹ್ಮೋಪದೇಶ ನೀಡುವರು.
ಲಿಂಗೈಕ್ಯ ಸದ್ಗುರು ಮಾನಸೇಂದ್ರ ಸ್ವಾಮೀಜಿಗಳ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಯಲಿದೆ ಎಂದು ಪಟ್ಟಾಧಿಕಾರ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.