

ತಾವರಗೇರಾ: ಪಟ್ಟಣ ಸೇರಿ ವಿವಿಧೆಡೆ ಬುಧವಾರ ತಡರಾತ್ರಿ ಮಳೆ ಸುರಿದಿದ್ದರಿಂದ ಒಣಗುವ ಹಂತಕ್ಕೆ ತಲುಪಿದ್ದ ತೊಗರಿ, ಎಳ್ಳು, ಹೆಸರು, ಅಲಸಂದಿ ಬೆಳೆಗಳಿಗೆ ಜೀವ ಕಳೆ ಬಂದಿದೆ.
ಕಳೆದ ಒಂದುವರೆ ತಿಂಗಳಿನಿಂದ ಮಳೆ ಬಾರದೆ ಬೆಳೆಗಳಿಗೆ ಸಂಕಷ್ಟ ಎದುರಾಗಿತ್ತು. ಬುಧವಾರ ತಾವರಗೇರಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ 79 ಎಂ.ಎಂ. ಮಳೆಯಾಗಿದೆ. ಕೆಲ ಜಮೀನಿನಲ್ಲಿ ನೀರಿನ ರಭಸಕ್ಕೆ ಒಡ್ಡುಗಳು ಒಡೆದಿವೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಪಟ್ಟಣದ ಸಿಮೆಂಟ್ ರಸ್ತೆಗಳು ಮಳೆ ರಭಸಕ್ಕೆ ಅಲ್ಪ ಪ್ರಮಾಣದಲ್ಲಿ ಕೊಚ್ಚಿ ಹೋಗಿವೆ. ಪಟ್ಟಣದ ಜನರಿಗೆ ಜೀವ ಜಲವಾದ ರಾಯನ ಕೆರೆಗೆ ಮಳೆ ನೀರು ಬಂದಿಲ್ಲ. ಫೀಡರ್ ಕೆನಾಲ್ ದುರಸ್ತಿ ಕಾರ್ಯ ಇರುವುದರಿಂದ ಮಳೆ ನೀರು ಹಳ್ಳಕ್ಕೆ ಹರಿದು ಹೋಗಿದೆ. ಇದರಿಂದ ಕೆರೆ ಮಳೆಗೆ ನೀರು ಹರಿದು ಬರುತ್ತಿಲ್ಲ.