

ತಾವರಗೇರಾ: ವಿದ್ಯಾರ್ಥಿಗಳು ಗುರಿ ಮುಟ್ಟಲು ಕಠಿಣ ಪರಿಶ್ರಮ ಅಗತ್ಯ ಎಂದು ಕರ್ನಾಟಕದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಾಗೂ ಕಾಲೇಜು ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ವಿದ್ಯಾರ್ಥಿಗಳು ಟಿವಿ, ಮೊಬೈಲ್, ಗುಟ್ಖಾ, ಮದ್ಯಪಾನ, ಸಿಗರೇಟ್ ಚಟಗಳಿಂದ ದೂರವಿರಬೇಕು ಎಂದರು.
ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಒಳ್ಳೆಯ ನಾಡನ್ನು ಕಟ್ಟಬೇಕು. ಜೀವನದುದ್ದಕ್ಕೂ ಭ್ರಷ್ಟಾಚಾರ, ಜಾತೀಯತೆ, ಅಪರಾಧ ಮಾಡಬಾರದು. ಕಾರ್ಯಕ್ಷಮತೆ, ವಚನಬದ್ಧತೆ, ಧೈರ್ಯ, ಅನುಕಂಪ ಮೈಗೂಡಿಸಿಕೊಂಡು ಗುರಿ ಸಾಧಿಸಬೇಕು ಎಂದರು.
ಪಿಎಸ್‌ಐ ನಾಗರಾಜ ಕೋಟಗಿ ಮಾತನಾಡಿ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆಯುಷ್ಯ ವೃದ್ಧಿಸಿಕೊಳ್ಳಲು ವ್ಯಾಯಾಮ, ಯೋಗ, ಮಿತ ಆಹಾರ ಸೇವನೆ ಮಾಡಬೇಕು. ಎಲ್ಲರಲ್ಲೂ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಸಾವಿನ ನಂತರ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನಮಾಡುವುದಾಗಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಘೋಷಣೆ ಮಾಡಿದರು.ಕಾಲೇಜಿನ ಪ್ರತಿಭಾವಂತ, ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ನಾಲತವಾಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ನರಹರಿಯಪ್ಪ ಕೊಂಕಲ ಶಾಮಣ್ಣ ಸೈಂದರ್, ನಾರಾಯಣಪ್ಪ ಐಲಿ, ಶಿವನಗೌಡ ವಿಠಲಾಪೂರ, ಅಮರೇಗೌಡ ಇದ್ದರು.