

ತಾವರಗೇರಾ: ಪಟ್ಟಣದ ರಾಯನಕೆರೆಯ ಒಡ್ಡಿನಲ್ಲಿ ಬಿದ್ದದ್ದ ಬೊಂಗಾವನ್ನು ಶನಿವಾರ ಸಂಜೆ ಸಣ್ಣ ನೀರಾವರಿ ಇಲಾಖೆಯಿಂದ ಉಸುಕಿನ ಚೀಲಗಳನ್ನು ಹಾಕಿ ಮುಚ್ಚಲಾಯಿತು.
ಒಂದು ಕೋಟಿ ರೂ. ವೆಚ್ಚದಲ್ಲಿ ರಾಯನಕೆರೆ ಒಡ್ಡಿನ ದುರಸ್ತಿಗೆ ಕಲ್ಲಿನ ರಿವೀಟ್ ಮೆಂಟ್ ಜೋಡಿಸಲಾಗಿದೆ. ತಜ್ಞರ ಪ್ರಕಾರ ಕಾಮಗಾರಿ ಗುಣಮಟ್ಟದಿಂದ ಆಗಿದೆ. ಆದರೆ, ಕೆರೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಗೇಟ್‌ವಾಲ್‌ನಲ್ಲಿ ಬೊಂಗಾ ಬಿದ್ದಿದೆ. ಸಣ್ಣ ನೀರಾವರಿ ಇಲಾಖೆ ಕುಷ್ಟಗಿ ಉಪವಿಭಾಗದ ಎಇಇ ದೇವೇಂದ್ರಪ್ಪ ನೇತೃತ್ವದಲ್ಲಿ ಬೊಂಗಾ ಮುಚ್ಚುವ ಕಾರ್ಯ ನಡೆದಿದೆ.
ಕಳೆದೆರಡು ದಿನಗಳಿಂದ ನಗರದ ರಾಯನಕೆರೆ ಒಡ್ಡಿನಲ್ಲಿ ಬಿದ್ದಿರುವ ಬೊಂಗಾದಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿತ್ತು. ಹೀಗಾಗಿ ಇಲಾಖೆ ಕ್ರಮ ಕೈಗೊಂಡಿದೆ. ಆದರೆ ನೀರು ನಿರಂತರವಾಗಿ ಹರಿಯುತ್ತಿದ್ದು, ಭಾನುವಾರ ಬೆಳಗ್ಗೆಯಿಂದ ಶಾದಿಮಹಲ್ ಪಕ್ಕದಿಂದ ಚಟ್ನಿಕೆರೆಗೆ ಹೋಗುವ ಕಾಲುವೆ ಮೂಲಕ ಕೆರೆ ಸೇರುತ್ತಿದೆ. ವೈಜನಾಥ ದೇವಸ್ಥಾನದ ಗರ್ಭ ಗುಡಿಯಲ್ಲಿ 5 ಅಡಿ ನೀರು ಸಂಗ್ರಹವಾಗಿದೆ.