ಬಡವರ ಫ್ರಿಡ್ಜ್‌ಗೆ ಎಲ್ಲಿಲ್ಲದ ಬೇಡಿಕೆ

sale of pots
ತಾವರಗೇರಾದಲ್ಲಿ ಅಮರೇಶಪ್ಪ ಕುಂಬಾರ ಅವರು ಮಣ್ಣಿನ ಮಡಕೆಗಳನ್ನು ಮಾರಾಟ ಮಾಡುತ್ತಿರುವುದು.
Published on

ತಾವರಗೇರಾ: ಬೇಸಿಗೆಯ ಆರಂಭದ ಹಂತದಲ್ಲಿಯೇ ಬಿಸಿಲಿನ ತಾಪ ಏರಿಕೆ ಕಂಡಿದೆ. ಹೀಗಾಗಿ ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಪಡೆದ ಮಣ್ಣಿನ ಮಡಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

ಪಟ್ಟಣದ ಎಸ್‌ಬಿಐ ಬ್ಯಾಂಕ್ ಎದುರಿಗೆ ಮಡಕೆಗಳ ವ್ಯಾಪಾರ ವಹಿವಾಟು ಜೋರಾಗಿದೆ. ನಿತ್ಯ 30ರಿಂದ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ದೇಹವನ್ನು ಉಷ್ಣಾಂಶದಿಂದ ಕಾಪಾಡಿಕೊಳ್ಳಲು ಜನರು ಮಡಕೆ ಖರೀದಿಸಲು ಮುಂದಾಗುತ್ತಿದ್ದಾರೆ.

ಮಣ್ಣಿನ ಮಡಕೆಗಳನ್ನು ತಯಾರಿಸುವ ಕುಂಬಾರ ಕುಟುಂಬದವರು ಜನತೆಗೆ ಬೇಕಾಗುವಂತ ನಾನಾ ವಿನ್ಯಾಸದಲ್ಲಿ ಆಕರ್ಷಣೀಯ ಆಧುನಿಕ ಜಗತ್ತಿಗೆ ತಕ್ಕಂತೆ ಮಡಕೆಗಳನ್ನು ತಯಾರಿಸುತ್ತಿದ್ದಾರೆ. ಗಡಿಗೆ, ಹರವಿ, ಕುಡಿಕೆ, ನೀರಿನ ಬಾಟಲ್, ಲೋಟ, ಹಾಟ್ ಬಾಕ್ಸ್ , ಚಹಾ ಗ್ಲಾಸ್‌ಗಳನ್ನು ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡಲಾಗುತ್ತಿದೆ. ಕೆಂಪು ಗಡಿಗೆ 200-400 ರೂ., ನೀರಿನ ಬಾಟಲ್ 150-200 ರೂ., ಲೋಟ 50-100 ರೂ., ಹಾಟ್ ಬಾಕ್ಸ್ 200 ರೂ., ಮೊಸರು, ಹಾಲಿನ ಮಡಕೆ 150-200 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.

ಈ ಮೊದಲು ಕೆರೆ ಮಣ್ಣಿನಿಂದ ತಿಗರಿ ಮೂಲಕ ಸಣ್ಣ ಹಾಗೂ ದೊಡ್ಡ ಗಾತ್ರದ ಗಡಗಿ, ಹರವಿ, ಕೊಡ, ಸಣ್ಣ ಬಿಂದಗಿ, ತತ್ರಾಣಿ ತಯಾರು ಮಾಡಲಾಗುತ್ತಿತ್ತು. ಈಗ ನಮ್ಮಲ್ಲಿಗೆ ಆಕರ್ಷಣೀಯ ವಿನ್ಯಾಸದ ಮಡಕೆಗಳನ್ನು ಗುಜರಾತ್ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲಕ ತರಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಕಾರಣ ವಹಿಸವಾಟು ಸಹ ಚನ್ನಾಗಿಯೇ ನಡೆಯುತ್ತಿದೆ.

ಅಮರೇಶಪ್ಪ ಎಸ್.ಕುಂಬಾರ ಮಡಕೆಗಳ ಮಾರಾಟಗಾರ, ತಾವರಗೇರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net