

ತಾವರಗೇರಾ: ಮನಷ್ಯನ ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರದ ಜತೆಗೆ ಅಯೋಡಿನ್ ಅಂಶವೂ ಅವಶ್ಯ ಎಂದು ಹಿರಿಯ ಆರೋಗ್ಯಾಧಿಕಾರಿ ಶಂಕ್ರಮ್ಮ ಹೇಳಿದರು.
ಪಟ್ಟಣದ ಬಸವಣ್ಣ ಕ್ಯಾಂಪ್‌ನಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಸಪ್ತಾಹದಲ್ಲಿ ಮಾತನಾಡಿದರು. ಅಯೋಡಿನ್ ಕೊರತೆಯಿಂದ ಉಂಟಾಗುವ ಕಾಯಿಲೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಪೂಜಾ ಮಾತನಾಡಿ, ಅಯೋಡಿನ್ ಕೊರತೆಯಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಸಾಮಾನ್ಯ ಉಪ್ಪಿನ ಬದಲಿಗೆ ಅಯೋಡೀಕರಿಸಿದ ಉಪ್ಪನ್ನು ಬಳಸುವ ಬಗ್ಗೆ ಮತ್ತು ಅಯೋಡಿನ್ ಕೊರತೆಯ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಹಿರಿಯ ಆರೋಗ್ಯಾಧಿಕಾರಿ ಅನ್ವರ್‌ಸಾಬ, ಆರೋಗ್ಯ ಇಲಾಖೆ ಸಿಬ್ಬಂದಿ ಅರುಣಕುಮಾರ, ಲಕ್ಷ್ಮೀ ದಟ್ಟಿ, ಅಶ್ವಿನಿ, ಲಕ್ಷ್ಮೀ ನಾಯಕ, ನರಸುಬಾಯಿ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಗಾಯತ್ರಿ ಇದ್ದರು.