

ತಾವರಗೇರಾ: ಹಂಪಿ ಹೇಮಕೂಟ ಗಾಯತ್ರಿಪೀಠದಿಂದ ಬಾದಾಮಿಗೆ ಸಾಗುತ್ತಿರುವ ಶ್ರೀ ಬನಶಂಕರಿ ದೇವಿ ಪಿತಾಂಬರ ಯಾತ್ರೆಯು ಬುಧವಾರ ರಾತ್ರಿ ಪಟ್ಟಣ ತಲುಪಿತು. ಸ್ಥಳೀಯ ದೇವಾಂಗ ಸಮುದಾಯದ ಮುಖಂಡರು ಸ್ವಾಗತಿಸಿ, ಶ್ರೀ ವೆಂಕಟೇಶ್ವರ ದೇವಸ್ಥಾನವರೆಗೆ ಮೆರವಣಿಗೆ ನಡೆಸಿ ಬೀಳ್ಕೊಟ್ಟರು.
ವೆಂಕಟೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಿವಿಧ ಮಠಾಧೀಶ ಸಾನ್ನಿಧ್ಯದಲ್ಲಿ ಧರ್ಮ ಸಭೆ ನಡೆಯಿತು. ಹೇಮಕೂಟ ಮಹಾ ಸಂಸ್ಥಾನದ ಶ್ರೀ ದಯಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಶಿವಾನಂದ ಸ್ವಾಮೀಜಿ, ಹಂಪಿ ವಿರೂಪಾಕ್ಷೇಶ್ವರ ದೇಗುಲದ ಅರ್ಚಕ ಶ್ರೀಧರ ಭಟ್, ಬೀಳಗಿಯ ನಾಗರಾಜ, ಗಂಗಾವತಿಯ ನಾಗರಾಜ ಪರಗಿ, ಗದಗದ ವನಹಳ್ಳಿ ಶಂಕ್ರಪ್ಪ ಮಾತನಾಡಿದರು. ಸ್ಥಳೀಯ ದೇವಾಂಗ ಸಮುದಾಯದ ಮುಖಂಡರಾದ ಪ್ರಲ್ಲಾದಗೌಡ, ರಾಘವೇಂದ್ರ ಕೊಂಡಕುಂದಿ, ಅಮರೇಶಪ್ಪ ಕೊಪ್ಪರದ, ನರಹರಿಯಪ್ಪ ಕೊಂಕಲ, ವೆಂಕಣ್ಣ ಕರಡಕಲ್, ಹನಮೇಶ ಕೊಂಕಲ ಇತರರಿದ್ದರು. ಪ್ರಲ್ಲಾದಗೌಡ ಮೆದಿಕೇರಿ ಸ್ವಾಗತಿಸಿದರು. ಗುರುವಾರ ಮುಂಜಾನೆ ಪಟ್ಟಣದಿಂದ ದೋಟಿಹಾಳ ಕಡೆಗೆ ಪೀತಾಂಬರ ಯಾತ್ರೆ ಹೊರಟಿತು. ಪಟ್ಟಣದ ನೂರಾರು ಭಕ್ತರು ಪಾದಯಾತ್ರೆ ಮೂಲಕ ಬಾದಾಮಿಗೆ ತೆರಳಿದರು. ದೂರದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ರಾಯಚೂರು, ಗದಗದಿಂದಲೂ ಭಕ್ತರು ಆಗಮಿಸಿದ್ದರು.