

ತಾವರಗೇರಾ: ಸಮೀಪದ ಗುಡ್ಡದ ಹನುಮಸಾಗರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ‘ಗಲ್ಲಿ ಗಲ್ಲಿಗೆ ಜನಪದ ಜೋಕಾಲಿ’ ಶೀರ್ಷಿಕೆಯಡಿ ಸಂಪ್ರದಾಯ ಹಾಡುಗಳ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ನಡೆಯಿತು.
ಸ್ಥಳೀಯ ಮುಖಂಡ ಸಣ್ಣಭೀಮಪ್ಪ ಮಾತನಾಡಿ, ಜನಪದ ಕಲೆಯ ಮೂಲ ಪರಂಪರೆಯಲ್ಲಿ ಸಂಪ್ರದಾಯ ಹಾಡುಗಳ ಪಾತ್ರ ಪ್ರಮುಖವಾಗಿದೆ. ಹಳ್ಳಿ-ಹಳ್ಳಿಗೆ ತೆರಳಿ ಅಲ್ಲಿನ ಮಹಿಳೆಯರ ಹಾಡುಗಾರಿಕೆಗೆ ಪ್ರೋತ್ಸಾಹಿಸುತ್ತಿರುವ ಕುಷ್ಟಗಿಯ ಪುಣ್ಯಕೋಟಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ವಾಲ್ಮೀಕಪ್ಪ ಯಕ್ಕರನಾಳ ಮಾತನಾಡಿದರು. ಪ್ರಮುಖರಾದ ಶಾಂತಮ್ಮ ತಳವಾರ, ಶಂಕ್ರಮ್ಮ, ಶ್ರೀದೇವಿ, ಕಂಟೆಮ್ಮ, ಹುಲಿಗೆಮ್ಮ ಮುಂತಾದ ಮಹಿಳೆಯರು ಜೋಗುಳ ಪದ, ಸೋಬಾನೆ ಹಾಡು, ಮದುವೆಯ ಬೀಗರ ಹಾಡು, ಬೀಸುಕಲ್ಲಿನ ಪದ ಹಾಡಿದರು. ಭೀಮಪ್ಪ, ಬಾಲಪ್ಪ, ಶುಖಮುನಿ, ಹನುಮಂತ ಇತರರಿದ್ದರು.