

ತಾವರಗೇರಾ: ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಜು.11ರ ನಂತರ ದುಶ್ಚಟ ಬಿಡಿಸುವ ಪಾದಯಾತ್ರೆ ಹಾಗೂ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲು ತಿರ್ಮಾನಿಸಲಾಯಿತು.
ಕುಷ್ಟಗಿಯ ನಿಡಶೇಸಿ ಮಠಾಧೀಶ ಶ್ರೀ ಕರಿಬಸವ ಶಿವಾಚಾರ್ಯ ಮಾತನಾಡಿ, ಈಗಾಗಲೇ ಯಲಬುರ್ಗಾ ಹಾಗೂ ಕುಷ್ಟಗಿ ಸುತ್ತಲಿನ 35-40ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಮಾಡಿ, ಸಾವಿರಾರು ಜನರಲ್ಲಿದ್ದ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಳ್ಳಲಾಗಿದೆ.
ಈಗ ತಾವರಗೇರಾ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಮಾಡಲಾಗುವುದು. ಈ ಭಾಗದಲ್ಲಿ ಸಂಚರಿಸಲು ಕನಿಷ್ಠ 21ದಿನಗಳಾದರೂ ಬೇಕು. ಈ ವೇಳೆ ಮಠಕ್ಕೆ ಏನೂ ಕೇಳುವುದಿಲ್ಲ. ಬದಲಾಗಿ ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ. ಸಂಜೆ ಪ್ರವಚನ, ಮುಂಜಾನೆ ಮನೆ ಮನೆಗೆ ಪಾದಯಾತ್ರೆ ಮಾಡಲಾಗುವುದು. ಇಂತಹ ಕಾರ್ಯಕ್ರಮಕ್ಕೆ ಕಾರ್ಯಕರ್ತರು, ಗ್ರಾಮದ ಹಿರಿಯರು ಸಮಿತಿಗಳನ್ನು ರಚಿಸಿಕೊಂಡು ಯಶಸ್ವಿಗೊಳಿಸಬೇಕು ಎಂದರು.
ದುಶ್ಚಟ ಬಿಡಿಸಲು ಯಾತ್ರೆ ಕೈಗೊಂಡಿರುವ ಸ್ವಾಮೀಜಿಗಳ ಆಶಯಕ್ಕೆ ಸ್ವಾಗತ. ಮೊಹರಂ ಮುಗಿದ ನಂತರ ಮಾಡಿದರೆ ಒಳ್ಳೆಯದು ಎಂದು ವೈದ್ಯ ಶ್ಯಾಮೀದ ದೋಟಿಹಾಳ ಅಭಿಪ್ರಾಯಪಟ್ಟರು. ಇದ್ದಕ್ಕೆ ಸಭೆ ಸಹ ಸಮ್ಮತಿಸಿತು.
ಗ್ಯಾರಂಟಿ ಸಮಿತಿ ಸದಸ್ಯ ಅಮರೇಶ ಗಾಂಜಿ, ಪಪಂ ಸದಸ್ಯೆ ಬೇಬಿ, ಪ್ರಮುಖರಾದ ನಾಗರಾಜ ನಂದಾಪೂರ, ಗೋಪಾಲಕೃಷ್ಣ ದರೋಜಿ, ಬಸವರಾಜ ಈಳಗೇರ, ಆದಪ್ಪ ನಾಲತವಾಡ, ಪ್ರಶಾಂತ ಕಲಾಲ, ಅಮರೇಶ ಕುಂಬಾರ, ಎನ್.ಶಾಮೀದ, ಏಕನಾಥ ಬಡಗಿಂಚಿ, ರೇಖಾ, ರಶ್ಮಿ ಇತರರಿದ್ದರು.