ತತ್ವ, ಸಿದ್ಧಾಂತದ ಮೇಲೆ ಜೀವಿಸಿದ ಮಹಾನ್‌ಚೇತನ

30-KGLPHOTO-1,,
ಕೊಳ್ಳೇಗಾಲ ಪಟ್ಟಣದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರ ನಿವಾಸದಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎನ್.ವಿ.ಪರಮೇಶ್ವರಯ್ಯ, ಶಿವಕುಮಾರ್, ಎಸ್.ಸಿದ್ದಪ್ಪಾಜಿ, ಚಿಂತು ಪರಮೇಶ್, ಪ್ರಕಾಶ್ ಶಂಕನಪುರ, ಜಗದೀಶ್ ಶಂಕನಪುರ, ಕೆ.ಕೆ ಮೂರ್ತಿ ಇದ್ದರು.
Published on

ಕೊಳ್ಳೇಗಾಲ: ಚಾಮರಾಜನಗರ ಸಂಸದ ಹಾಗೂ ರಾಜಕೀಯ ಮುತ್ಸದ್ದಿ ವಿ.ಶ್ರೀನಿವಾಸಪ್ರಸಾದ್ ಅವರ ನಿಧನದ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ನಿವಾಸದಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲ ವತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.


ಎಸ್.ಬಾಲರಾಜ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿ.ಶ್ರೀನಿವಾಸಪ್ರಸಾದ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ 2 ನಿಮಿಷ ಕಾಲ ಮೌನ ಆಚರಿಸಿ ಸಂತಾಪ ಸೂಚಿಸಿದರು.


ಎಸ್.ಬಾಲರಾಜ್ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರು ತತ್ವ, ಸಿದ್ಧಾಂತದ ಮೇಲೆ ಜೀವನ ನಡೆಸಿದ ಮಹಾನ್‌ಚೇತನ. ಅವರ ಕೆಲಸಗಳು, ಶೋಷಿತರ ಪರವಾಗಿ ಮಾಡಿದ ಹೋರಾಟದಿಂದ ಮನೆ ಮಾತಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿಗಳಾಗಿದ್ದರು. 1991ರಿಂದಲೂ ವಿ.ಶ್ರೀನಿವಾಸಪ್ರಸಾದ್ ಅವರನ್ನು ನೋಡಿದ್ದೇನೆ. ನನ್ನ ಮೊದಲ ಮತ ಅವರಿಗೆ ಅಂದು ನೀಡಿದ್ದೇನೆ ಎಂದು ಸ್ಮರಿಸಿದರು.
ದೇಶ ಹಾಗೂ ರಾಜ್ಯದ ವಿವಿಧ ಅಧಿಕಾರಗಳನ್ನು ಪಡೆದು ಜನರ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಶೋಷಿತರ ಗಟ್ಟಿ ಧ್ವನಿ ಮರೆಯಾಗಿದೆ. ಅವರ ಹೆಸರು, ಕೀರ್ತಿ ನಮಗೆ ಸ್ಫೂರ್ತಿಯಾಗಿದೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ, ಜಿಲ್ಲಾ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಯುವ ಮೋರ್ಚಾ ಅಧ್ಯಕ್ಷ ಆನಂದ್, ತೇರಂಬಳ್ಳಿ ರವಿ, ನಗರಸಭೆ ಸದಸ್ಯ ಚಿಂತು ಪರಮೇಶ್, ಪ್ರಕಾಶ್ ಶಂಕನಪುರ, ಮುಖಂಡರಾದ ಡೇರಿ ಗಿರೀಶ್, ಸುಂದ್ರಪ್ಪ, ಜಗದೀಶ್ ಶಂಕನಪುರ, ಮಹೇಶ್ ಬೆಂಡರಹಳ್ಳಿ, ಮಧು ರತ್ನವೇಲ್, ಪರಶಿವ ಬಸ್ತೀಪುರ, ಕೆ.ಕೆ.ಮೂರ್ತಿ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net