

ಕೇಸರಿಮಯವಾದ ಬೆಳಗಾವಿ ರಸ್ತೆಗಳು ಎಲ್ಲೆಲ್ಲೂ ಅಯೋಧ್ಯೆ ಜಪ
ಬೆಳಗಾವಿ:ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶವೇ ಸಂಭ್ರಮದಲ್ಲಿರುವಾಗ ಕುಂದಾನಗರಿ ಬೆಳಗಾವಿಯಲ್ಲಿ ಶ್ರೀರಾಮನ ಚಿತ್ರದ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಮಹಾನಗರದ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು ಸಂಪೂರ್ಣ ಕೇಸರಿಮಯವಾಗಿವೆ.
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್ ಎಸ್) ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಸೇರಿ ವಿವಿಧ ಹಿಂದುಪರ ಸಂಘಟನೆಗಳು, ಬಿಜೆಪಿಯ ಸಾವಿರಾರು ಕಾರ್ಯಕರ್ತರು ನಗರ, ಗ್ರಾಮೀಣ ಭಾಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹನುಮಾನ ಚಾಳೀಸಾ ಪಠಣ, ಕೇಸರಿ ಧ್ವಜ, ಕೇಸರಿ ಫಲಕಗಳನ್ನು ಕಟ್ಟುವ ಮೂಲಕ ನಗರವನ್ನು ಸಂಪೂರ್ಣ ಕೇಸರಿಮಯ ಮಾಡಿದ್ದಾರೆ.
ಬಿಜೆಪಿ ಶಾಸಕ ಅಭಯ ಪಾಟೀಲ ಆರಂಭಿಸಿರುವ ಉಚಿತ ಶ್ರೀರಾಮಚಂದ್ರನ ಟ್ಯಾಟೂ ಅಭಿಯಾನಕ್ಕೆ ಸ್ಪಂದನೆ ವ್ಯಕ್ತವಾಗಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಆರಂಭಿಸಿರುವ ಮೂರು ಕಡೆಗಳಲ್ಲಿ ಟ್ಯಾಟೂ ಕೇಂದ್ರಗಳ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತುಕೊಂಡು ಯುವಕರು, ಯುವತಿಯರು ಆದಿಯಾಗಿ ಎಲ್ಲರೂ ತಮ್ಮ ಕೈಗಳ ಮೇಲೆ ಶ್ರೀರಾಮನ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ ಬರಹದೊಂದಿಗೆ ರಾಮನ ಟ್ಯಾಟೂ ಹಾಕಲಾಗುತ್ತಿದೆ. ಇಲ್ಲಿಯವರೆಗೆ ನಗರದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದಕ್ಕಾಗಿ ಗೋವಾ, ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ಸುಮಾರು 500 ಜನರು ಟ್ಯಾಟೂ ಹಾಕಲು ಬೆಳಗಾವಿ ನಗರಕ್ಕೆ ಆಗಮಿಸಿದ್ದಾರೆ.
ನಗರದ ಹಳೆಯ ಪಿ.ಬಿ.ರಸ್ತೆಯ ಅಭಯ ಪಾಟೀಲ ಅವರ ಕಚೇರಿ ಆವರಣದಲ್ಲಿ ಆರು ದಿನಗಳ ಅವಧಿಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನರಿಗೆ ಟ್ಯಾಟೂ ತೆಗೆಯಿಸಿಕೊಂಡಿದ್ದಾರೆ. ಈಗ ಜಿಲ್ಲೆಯಲ್ಲೆಡೆ ರಾಮಮಯವಾಗುತ್ತಿದ್ದು, ಈ ಶುಭ ದಿನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ರಾಮ ಭಕ್ತರ ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ.
ನಾಲ್ಕೈದು ದಿನಗಳಿಂದ ಬೆಳಗಾವಿ ಮಹಾನಗರ ಪ್ರಮುಖ ಮಾರುಕಟ್ಟೆ, ರಸ್ತೆ ಬದಿ ಅಂಗಡಿಗಳಲ್ಲಿ ಶ್ರೀರಾಮನ ಭಾವಚಿತ್ರ ಒಳಗೊಂಡಿರುವ ಕೇಸರಿ ಬಾವುಟಗಳು, ಕೇಸರಿ ಬಟ್ಟೆಗಳು, ಧ್ವಜಗಳು ನಿರೀಕ್ಷೆ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಎಲ್ಲ ವ್ಯಾಪಾರಿಗಳು ಪರೋಕ್ಷವಾಗಿ ಶ್ರೀರಾಮನಿಗೆ ಭಕ್ತಿ ಅರ್ಪಣೆ ಮಾಡುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಬೆಳಗಾವಿಯಲ್ಲಿ ಸಂಪೂರ್ಣ ಅಯೋಧ್ಯೆಯಂತೆಯೇ ಧಾರ್ಮಿಕ ವಾತಾವರಣ ನಿರ್ಮಾಣವಾಗಲಿದೆ ಎಂದು ಹಿಂದುಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
………………….
ಬಾಕ್ಸ್
ಬೆನ್ನಿನ ಮೇಲೆ ಶ್ರೀರಾಮನ ಚಿತ್ತಾರ
ಕೋಟ್ಸ್
ಶ್ರೀರಾಮನ ಟ್ಯಾಟೂ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ಯಾಟೂ ಕೇಂದ್ರಗಳಿಗೆ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸುಮಾರು 20 ಸಾವಿರ ಜನರು ಶ್ರೀರಾಮನ ಟ್ಯೂಟು ಹಾಕಿಸಿಕೊಳ್ಳಲಿದ್ದಾರೆ. ಜ.22ರಂದು ಈ ಶುಭ ದಿನವಾಗಿದ್ದು, ಈ ಸಂಭ್ರಮ ಅಚ್ಚಳಿಯದೆ ಉಳಿದುಕೊಳ್ಳಲಿ ಎಂಬ ಉದ್ದೇಶದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಭಯ ಪಾಟೀಲ, ಬೆಳಗಾವಿ ದಕ್ಷಿಣ ಶಾಸಕ