

ವಿಜಯಪುರ: ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಫ್‌ಗೆ ಸೇರಿದೆ. ಭೂ ಸುಧಾರಣಾ ಕಾಯ್ದೆ ಹಾಗೂ ಹಲವು ಕಾರಣಗಳಿಂದ ಸಾವಿರಾರು ಎಕರೆ ಜಮೀನು ಇನ್ನೂ ವಕ್ಫ್ ಮಂಡಳಿಗೆ ಇಂದೀಕರಣವಾಗಿಲ್ಲ. ಇಂದೀಕರಣವಾಗದ ಜಮೀನುಗಳು ಹಿಂದುಗಳಿಗೆ ಸೇರಿಲ್ಲ. ಶೇ. 30 ರಷ್ಟು ಮಾತ್ರ ಹಿಂದುಗಳಿಗೆ ಮಾರಾಟವಾಗಿದ್ದು ಕಂಡು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.
ವಕ್ಫ್ ಜಮೀನು ವಿವಾದ ಇತ್ಯರ್ಥಪಡಿಸಲು ಹಾಗೂ ನೋಟಿಸ್ ವಿಷಯಕ್ಕೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗುವುದು. ಉಪವಿಭಾಗಾಧಿಕಾರಿಗಳು, ತಹಸೀಲ್ದಾರರ ಜತೆಗೆ ಕಂದಾಯ ಇಲಾಖೆ ಮತ್ತು ವಕ್ಫ್ ಅಧಿಕಾರಿಗಳು ಸೇರಿಕೊಂಡು ವಕ್ಫ್ ನೋಟಿಫಿಕೇಷನ್ ಮುಂಚಿನ ಭೂದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ನಗರದಲ್ಲಿ ಭಾನುವಾರ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ವಕ್ಫ್ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸಿಂದಗಿಯ ಗುರುಲಿಂಗ ವಿರಕ್ತಮಠಕ್ಕೆ ಸೇರಿದ 1 ಎಕರೆ 36 ಗುಂಟೆ ಜಮೀನು ಉತಾರದಲ್ಲಿ ವಕ್ಫೃ್ ಎಂದು ಆಗಿತ್ತು. ಸರ್ವೇ ನಂಬರ್ ಗೊಂದಲದಿಂದ ಈ ಅಚಾತುರ್ಯವಾಗಿದೆ. ಸರ್ವೇ ನಂ. 1029 ರ ಬದಲಾಗಿ 1020 ಎಂದು ನಮೂದಾದ ಕಾರಣ ಗೊಂದಲ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಕ್ಫ್ ಕುರಿತು ಬೇಕಂತಲೇ ಗೊಂದಲ ಸೃಷ್ಟಿಸುತ್ತಿದ್ದಾರೆ. ರೈತರ ಒಂದೇ ಒಂದು ಎಕರೆ ಜಮೀನೂ ವಕ್ಫ್ ಮಂಡಳಿಗೆ ವರ್ಗಾವಣೆಯಾಗಿಲ್ಲ. ಈ ಕುರಿತು ಯಾವುದೇ ರೈತರಿಗೂ ನೋಟಿಸ್ ಜಾರಿಯಾಗಿಲ್ಲ. ರೈತರು ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಭಯ ನೀಡಿದರು.
ವಕ್ಫೃ್ ಕಾಯ್ದೆ ರಚನೆಯಾದ ನಂತರ ತನಗೆ ಸೇರಿದ ಜಮೀನುಗಳನ್ನು ಇಂದೀಕರಣ ಮಾಡಿಕೊಳ್ಳಬೇಕಿತ್ತು. ಈ ಕಾರ್ಯ ನಡೆಯದ ಪರಿಣಾಮ ವಕ್ಫ್ ಜಮೀನುಗಳು ಮಂಡಳಿಗೆ ಸೇರಿಲ್ಲ. ಕಾನೂನು ಸಲಹೆ ಪಡೆದುಕೊಂಡು ವಕ್ಫ್ ಜಮೀನು ಗುರುತಿಸಲು ಸರ್ಕಾರ ಮುಂದಿನ ಹೆಜ್ಜೆ ಇರಿಸಲಿದೆ ಎಂದರು.
ಬಬಲೇಶ್ವರ ಕ್ಷೇತ್ರದ ಹೊನವಾಡ ಗ್ರಾಮದ 1200 ಎಕರೆ ರೈತರ ಜಮೀನು ವಕ್ಫ್‌ಗೆ ಸೇರಲಿದೆ ಎಂಬುದು ಸುಳ್ಳು. ಈಗಾಗಲೇ ಈ ವಿವಾದಕ್ಕೆ ತೆರೆ ಎಳೆದಿದ್ದೇನೆ. ಒಬ್ಬ ರೈತನಿಗೂ ನೋಟಿಸ್ ನೀಡಿಲ್ಲ. ನೋಟಿಸ್ ನೀಡುವ ಅಧಿಕಾರ ಹೊಂದಿದ ತಹಸೀಲ್ದಾರ್ ಇಲ್ಲಿಯೇ ಇದ್ದಾರೆ. ಬೇಕಿದ್ದರೆ ಅವರನ್ನೇ ಕೇಳಿ ಎಂದು ಸಚಿವ ಪಾಟೀಲ ಹೇಳಿದರು.
ಹೊನವಾಡ ಗ್ರಾಮದ ಜಮೀನುಗಳಿಗೆ ಸಂಬಂಧಿಸಿದಂತೆ 1974 ರಲ್ಲಿ ವಕ್ಫ್ ಗೆಜೆಟ್‌ನಲ್ಲಿ ಸಂಪೂರ್ಣ ತಪ್ಪಾಗಿದೆ ನಮೂದಾಗಿದೆ. ಅದು ಮೂಲತಃ ವಿಜಯಪುರದ ಮಹಲಬಾಗಾಯತ್‌ದ ಸರ್ವೇ ನಂಬರ್‌ಗಳಿದ್ದು, ಆಗಿರುವ ತಪ್ಪನ್ನು ಮಂಡಳಿ ಸರಿಪಡಿಸಿದೆ. ಹೊನವಾಡ ಗ್ರಾಮದ 10 ರಿಂದ 11 ಎಕರೆ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದೆ. ಉಳಿದ ಭೂಮಿ ರೈತರದ್ದು. ರೈತರ ಒಂದಿಂಚೂ ಭೂಮಿ ವಕ್ಫ್‌ದಲ್ಲ ಎಂದು ಸ್ಪಷ್ಟಪಡಿಸಿದರು.
ಇಂಡಿ ತಾಲೂಕಿಗೆ ಸಂಬಂಧಿಸಿದಂತೆ ಇಂಡಿ ತಹಸೀಲ್ದಾರರು ನೋಟಿಸ್ ನೀಡದೆ ಸರ್ವೇ ನಂಬರ್ 41ರ ಆಸ್ತಿಯನ್ನು ಇಂದೀಕರಣ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಲು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿರುವೆ ಎಂದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್, ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.