ಭೂಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್‌ಫೋರ್ಸ್

madhu bangarappa meeting held in bangalore
ಬೆಂಗಳೂರಿನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು, ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಸಂತ್ರಸ್ತರು ಮತು ರೈತರೊಂದಿಗೆ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾಗರದ ಜಯಂತ್, ತೀ.ನ.ಶ್ರೀನಿವಾಸ್, ಶ್ರೀಕರ್, ಬಿ.ಎ. ರಮೇಶ್ ಹೆಗಡೆ, ದಿನೇಶ್ ಶಿರವಾಳ, ಧರ್ಮಪ್ಪ, ದುಗೂರು ಪರಮೇಶ್ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯ ಜಲವಿದ್ಯುತ್ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳ ಸಂತ್ರಸ್ತರ ಪುನರ್ವಸತಿ, ಭೂಮಿ ಸಮಸ್ಯೆ ಹಾಗೂ ಇತರೆ ಭೂ ಹಕ್ಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚನೆಯಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ಬುಧವಾರ ಶರಾವತಿ ಮುಳುಗಡೆ ಸಂತ್ರಸ್ತರು, ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಸಂತ್ರಸ್ತರು ಮತು ರೈತರೊಂದಿಗೆ ಸಭೆ ನಡೆಸಿದ ಅವರು, 1978ಕ್ಕಿಂತ ಮೊದಲು ಸಾಗುವಳಿ ಮಾಡುತ್ತಿದ್ದ ರೈತರಿಗೆ 3 ಎಕರೆ ಭೂಮಿ ಸಕ್ರಮಗೊಳಿಸಬೇಕು. ಈ ವಿಷಯದಲ್ಲಿ ಕೈಬಿಟ್ಟಿರುವ ಪ್ರಕರಣಗಳನ್ನು ಪರಿಗಣಿಸಬೇಕು ಎಂದರು.

ವಿವಿಧ ಭೂಮಿ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಸಾಗುವಳಿ ಭೂಮಿಗಳನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡುತ್ತಿರುವುದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಅರಣ್ಯಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ 2011ರ ವಿಶೇಷ ನ್ಯಾಯಾಲಯದಲ್ಲಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸುವ ಮೂಲಕ ರೈತರಿಗೆ ತೊಂದರೆ ಕೊಡಲಾಗುತ್ತಿದೆ ಎಂಬುದನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದ ಸಚಿವರು, ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 4ರ ಅಡಿಯಲ್ಲಿ ಮೀಸಲು ಅರಣ್ಯ ಪ್ರಾಥಮಿಕ ಅಧಿಸೂಚನೆಯಿಂದ ರೈತರ ಹಿಡುವಳಿ ಭೂಮಿ, ಬಗರ್‌ಹುಕುಂ ಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಕೈಬಿಟ್ಟು ಸೆಕ್ಷನ್ 17ರ ಅಡಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ, ಭೂಮಿ ಹಾಗೂ ವಸತಿ ಹಕ್ಕನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿಗೆ ಸಂಬಂಧಿಸಿದಂತೆ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಇದನ್ನು ತ್ವರತಿವಾಗಿ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು ಎಂದು ಹೇಳಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರೈತ ಮುಖಂಡರಾದ ಸಾಗರದ ಜಯಂತ್, ತೀ.ನ.ಶ್ರೀನಿವಾಸ್, ಶ್ರೀಕರ್, ಬಿ.ಎ. ರಮೇಶ್ ಹೆಗಡೆ, ದಿನೇಶ್ ಶಿರವಾಳ, ಧರ್ಮಪ್ಪ, ದುಗೂರು ಪರಮೇಶ್ ಸೇರಿ ವಿವಿಧ ಇಲಾಖೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net