

ಕೂಡ್ಲಿಗಿ: ಈಗಾಗಲೇ ಬೇಸಿಗೆ ಆರಂಭವಾಗಿದ್ದು , ಕ್ಷೇತ್ರದಲ್ಲೆಲ್ಲೂ ಕುಡಿವ ನೀರಿನ ತೊಂದರೆ ಎದುರಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಬಿಸಿ ಗಾಳಿ ಶುರುವಾಗಿದೆ. ಆದ್ದರಿಂದ ಜನ, ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಒದಗಿಸಬೇಕಿದೆ. ಇದಕ್ಕಾಗಿ ಅಧಿಕಾರಿಗಳು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಸಬೂಬು ಹೇಳಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನೀರಿನ ಬವಣೆ ಎದುರಾಗಿದೆ ಎಂದು ಪ್ರಶ್ನಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ, ಕ್ಷೇತ್ರದಲ್ಲೆಡೆ ನೀರು ಪೂರೈಕೆಯಾಗುತ್ತಿದೆ. ಕೊಳವೆ ಬಾವಿಗಳಲ್ಲೂ ನೀರಿದೆ. ಆದರೆ, 5 ರಿಂದ 6 ಗ್ರಾಮದಲ್ಲಿ ಈ ಬಾರಿ ನೀರಿನ ಕೊರತೆ ಕಾಣಬಹುದು. ಅಲ್ಲದೇ, ಹುರುಳಿಹಾಳು ಮ್ಯಾಸರ ಹಟ್ಟಿಯಲ್ಲಿನ ಕೊಳವೆ ಬಾವಿಯಲ್ಲಿ ರಾಸಾಯನಿಕ ಅಂಶ ಇದೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಶುದ್ದ ನೀರಿನ ಘಟಕ ಅಳವಡಿಸುವುದು ಸೂಕ್ತ ಎಂದರು. ಸದ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಕ್ಷೇತ್ರದ 25 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ನೀರಿನ ಕೊರತೆ ಎದುರಾಗದಂತೆ ನಿಗಾವಹಿಸಬೇಕು. ಕೆಲವು ಹಳ್ಳಿಯಲ್ಲಿ ಕಿರುನೀರು ಸಂಗ್ರಹಗಳಲ್ಲಿ ಸುಮ್ಮನೆ ನೀರು ಪೋಲಾಗುತ್ತಿದೆ. ಅದನ್ನು ತಡೆಯಲು ಸಂಬಂಧಿಸಿದ ಪಿಡಿಒ ಗಳಿಗೆ ಸೂಚನೆ ನೀಡಿ. ನೀರಿನ ಮೌಲ್ಯದ ಕುರಿತು ಆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸುವಂತೆ ತಾಪಂ ಇಒ ಕೆ. ನರಸಪ್ಪಗೆ ಸೂಚಿಸಿದರು. ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವ ದೂರುಗಳು ಬರುತ್ತಿವೆ. ಇದನ್ನು ಸರಿಪಡಿಸುವಂತೆ ಪಪಂ ಎಇ ಗಿರೀಶ್‌ಗೆ ತಿಳಿಸಿದರು.
ಪಟ್ಟಣ ನೀರು ಸರಬರಾಜು ಎಇಇ ಮಲ್ಲಿಕಾರ್ಜುನ ಮಾತನಾಡಿ, ಬನ್ನಿಗೋಳ ಜಾಕ್‌ವೆಲ್‌ನಿಂದ ನೀರಿನ ಪೂರೈಕೆ ಸಮರ್ಪಕವಾಗಿದೆ. ಇಲ್ಲಿನ ನೀರು ಸಂಗ್ರಹಗಾರ ತುಂಬಿವೆ ಎಂದು ಹೇಳಿದಾಗ ನಿಲ್ಲಿಸುತ್ತೇವೆ. ಆದರೆ, ವಾರ್ಡ್‌ಗಳಲ್ಲಿ ನೀರು ಪೂರೈಸುವವರು ನಿಗಾ ವಹಿಸಿಬೇಕೆಂದು ತಿಳಿಸಿದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲೋಹಿತ್ ಕುಮಾರ್, ಜೆಸ್ಕಾಂ ಎಇಇ ಏಕಾಂತ ರೆಡ್ಡಿ ಇತರರಿದ್ದರು.