ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ

13 skpp 1
Published on

ಸಕಲೇಶಪುರ : ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ಜಬಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಸರಾಸರಿ ಮಳೆಯಾಗದಿರುವ ಕಾರಣ ಮಲೆನಾಡಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಈಗಾಗಲೇ ತಾಲೂಕಿನ 18 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿರುವ 54 ಗ್ರಾಮಗಳನ್ನು ಗುರುತಿಸಲಾಗಿದೆ. ಇಲ್ಲಿ ಶೀಘ್ರವಾಗಿ ಕೊಳವೆ ಬಾವಿ ಕೊರೆಸಲು ಚಿಂತನೆ ನಡೆಸಲಾಗಿದೆ. ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ವಿದ್ಯುತ್ ಸ್ಥಗಿತಗೊಳಿಸಬೇಡಿ: ಗ್ರಾಪಂನಿಂದ ಕರೆಂಟ್ ಬಿಲ್ ಬಾಕಿ ಇದೆ ಎಂಬ ಕಾರಣಕ್ಕೆ ಬೇಸಿಗೆ ಮುಗಿಯುವವರೆಗೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಬೇಡಿ ಎಂದು ಸೆಸ್ಕ್ ಅಧಿಕಾರಿಗಳಿಗೆ ಶಾಸಕ ಮಂಜು ತಾಕೀತು ಮಾಡಿದರು. ಸದ್ಯ ತಾಲೂಕಿನ ಸಾಕಷ್ಟು ನದಿ, ತೊರೆಗಳಿಂದ ಮೋಟರ್‌ಗಳ ಮೂಲಕ ನೀರು ಎತ್ತ್ತಲಾಗುತ್ತಿದೆ ಎಂಬ ದೂರುಗಳಿವೆ. ಅಂತಹ ಬೆಳೆಗಾರರಿಗೆ ತಿಳಿಹೇಳುವ ಮೂಲಕ ಮೋಟರ್‌ಗಳನ್ನು ತೆರವುಗೊಳಿಸಿ ಎಂದು ಮಂಜು ಸೂಚಿಸಿದರು.
ಚುನಾವಣೆ ಕರ್ತವ್ಯಕ್ಕೆ ಬಳಸಿಕೊಂಡಿಲ್ಲ: ತಹಸೀಲ್ದಾರ್ ಮೇಘನಾ ಮಾತನಾಡಿ, ಬರ ನಿರ್ವಹಣೆ ಕೆಲಸ ಮಾಡಬೇಕಿರುವುದರಿಂದ ಕಂದಾಯ ಇಲಾಖೆಯ ಯಾವುದೇ ಅಧಿಕಾರಿಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿಲ್ಲ ಎಂದು ವಿವರಿಸಿದರು. ತಾಲೂಕಿನ 5,100 ರೈತರಿಗೆ ಅತಿವೃಷ್ಟಿ ಹಾನಿಯ 86 ಲಕ್ಷ ರೂ. (ಮೊದಲ ಕಂತಿನ) ಪರಿಹಾರದ ಹಣ ನೀಡಲಾಗಿದೆ ಎಂದರು.
ಮೇವು ಸಂಗ್ರಹವಿದೆ: ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆಯ ವೈದ್ಯ ಡಾ. ಜವರಯ್ಯ ಮಾತನಾಡಿ, ತಾಲೂಕಿನಲ್ಲಿರುವ 31,882 ಜಾನುವಾರುಗಳಿಗೆ ಮುಂದಿನ 96 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ಸದ್ಯ ಮುಂದಿನ ಎರಡು ತಿಂಗಳಿಗಾಗುವಷ್ಟು ಕುಡಿಯುವ ನೀರಿಗೆ ಸಮಸ್ಯೆ ತಲೆ ದೋರುವುದಿಲ್ಲ. ಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದಾದ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಅವಕಾಶವಿದೆ ಎಂದು ಹೇಳಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಅದಿತ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net