ಶೀಘ್ರದಲ್ಲಿಯೇ ಖರೀದಿ ಕೇಂದ್ರ ಪ್ರಾರಂಭ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Task Force Committee Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕಾರ್ಯ ನಿರ್ವಹಿಸಲು ಸರ್ಕಾರ ಜಿಲ್ಲೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ಜತೆಗೆ ರೈತರ ನೋಂದಣಿ ಕಾರ್ಯವನ್ನು ಹಾಗೂ ಭತ್ತ/ರಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಆದೇಶಿಸಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 34 ಎಂಎಸ್‌ಪಿ ನೋಂದಣಿ ಕೇಂದ್ರ ತೆರೆಯಲಾಗುವುದು. ಮಂಡ್ಯ ತಾಲೂಕಿನಲ್ಲಿ 6, ಮದ್ದೂರಿನಲ್ಲಿ 6, ಮಳವಳ್ಳಿ 4, ಕೆ.ಆರ್.ಪೇಟೆಯಲ್ಲಿ 6, ಪಾಂಡವಪುರ 4, ಶ್ರೀರಂಗಪಟ್ಟಣ 4 ಹಾಗೂ ನಾಗಮಂಗಲ ತಾಲೂಕಿನಲ್ಲಿ 4 ಕೇಂದ್ರ ಪ್ರಾರಂಭಿಸಲಾಗುವುದು. ರೈತರು ನೋಂದಣಿಯಾಗಲು ಆಧಾರ್ ಕಾರ್ಡ್ ಪ್ರತಿ, ಫ್ರೂಟ್ ಐಡಿ, ಆಧಾರ್ ಕಾರ್ಡ್ ಜೋಡಣೆ ಮಾಡಿರುವ ಮತ್ತು ಎನ್‌ಐಸಿಪಿ ಸಕ್ರಿಯವಾಗಿರುವ ಬ್ಯಾಂಕ್ ಖಾತೆ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಹೇಳಿದರು.

ಪ್ರತಿ ನೋಂದಣಿ ಕೇಂದ್ರಗಳಲ್ಲಿ ರೈತರಿಗೆ ಅಗತ್ಯ ಮಾಹಿತಿ ನೀಡುವ ನಾಮಫಲಕ ಅಳವಡಿಸಬೇಕು. ಇದರಲ್ಲಿ ಯಾವುದೇ ಗೊಂದಲವಾಗಬಾರದು. ಜತೆಗೆ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಫ್ರೂಟ್ ಐಡಿ/ಬೆಳೆ ಸಮೀಕ್ಷೆ ಬಗೆಗಿನ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೃಷಿ ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಕಳೆದ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು 21,855 ರೈತರು ನೋಂದಣಿಯಾಗಿದ್ದರು. ಇದರಲ್ಲಿ 8,281 ರೈತರಿಂದ 1,66,409 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net