ಮತದಾರರ ಮನ ಗೆಲ್ಲಲು ಟಾಸ್ಕ್

27mdk02 Manu KG
Published on

ಮಡಿಕೇರಿ:

ಈಗಿನ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಮಾತ್ರ ಅಭ್ಯಾಸದಲ್ಲಿ ಬ್ಯುಸಿ ಇರುವುದಿಲ್ಲ. ಚುನಾವಣೆಯ ಪ್ರಸ್ತುತ ಕಾಲದಲ್ಲಿ ರಾಜಕಾರಣಿಗಳೂ ಅಭ್ಯಾಸ ನಡೆಸಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ. ಮಕ್ಕಳು ತಾವು ಮಾಡಿರುವ ಕೆಲಸಗಳ ಬಗ್ಗೆ ಶಿಕ್ಷಕರು, ಪೋಷಕರಿಗೆ ವರದಿ ಸಲ್ಲಿಸಿದಂತೆ ರಾಜಕೀಯ ಪ್ರಮುಖರು ಕೂಡ ತಮಗೆ ಒಪ್ಪಿಸಿದ ಟಾಸ್ಕ್‌ಗಳ ಪ್ರಗತಿ ಬಗ್ಗೆ ತಮ್ಮ ಮೇಲಿನವರಿಗೆ ದಿನಂಪ್ರತಿ ಮಾಹಿತಿ ನೀಡಬೇಕು. ಎಲ್ಲಾ ಪಕ್ಷಗಳಲ್ಲೂ ಕೆಳ ಹಂತದ ನಾಯಕರನ್ನು ಮೇಲ್ಮಟ್ಟದಿಂದ ತೀವ್ರವಾಗಿ ಗಮನಿಸುವುದರಿಂದ ಕಾಟಾಚಾರದ ಕೆಲಸವನ್ನೂ ಮಾಡುವಂತೆಯೂ ಇಲ್ಲ.

ಪ್ರಮುಖ ರಾಜಕೀಯ ಪಕ್ಷಗಳ ಬೂತ್ ಮಟ್ಟದ ನಾಯಕರು, ಹೋಬಳಿ ಹಾಗೂ ತಾಲೂಕು ಮಟ್ಟದ ನಾಯಕರಿಗೆ ಈಗ ಬಿಡುವು ಇಲ್ಲದಷ್ಟು ಕೆಲಸ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ತಮ್ಮ ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ. ’ಫೀಲ್ಡ್ ವರ್ಕ್’ ಮತ್ತು ’ಟೇಬಲ್ ವರ್ಕ್’ಗಳ ಮೂಲಕ ತಾವು ನಿರ್ವಹಿಸಿದ ಕೆಲಸಗಳನ್ನು ಅಯಾಯಾ ದಿನವೇ ಮೇಲಿನವರಿಗೆ ವರದಿ ಒಪ್ಪಿಸಬೇಕಾಗಿದೆ. ಬಿಜೆಪಿಯಲ್ಲಿ ಈ ಪ್ರಕ್ರಿಯೆ ಸ್ವಲ್ಪ ಹೆಚ್ಚು ಕಂಡು ಬರುತ್ತಾರೆ. ’ನಮ್ಮನ್ನು ಪ್ರತಿದಿನವೂ ರುಬ್ಬಲಾಗುತ್ತಿದೆ,’ ಎನ್ನುತ್ತಾರೆ ಬಿಜೆಪಿಯ ನಾಯಕರು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್‌ನಲ್ಲೂ ಇಂತಹ ಪ್ರಕ್ರಿಯೆಗಳನ್ನು ಕಾಣಬಹುದು.

ಬಿಜೆಪಿಯಲ್ಲಿ ’ಪೇಜ್ ಪ್ರಮುಖ್’ ಹುದ್ದೆ ಇದ್ದು, ಮತದಾರರ ಪಟ್ಟಿಯ ಒಂದು ಪುಟದ ಉಸ್ತುವಾರಿ ಈತನಿಗೆ ಕೊಡಲಾಗಿರುತ್ತದೆ. ಆ ಪುಟದಲ್ಲಿರುವ ಸುಮಾರು ೩೦ ರಷ್ಟು ಮತದಾರರ ಪೈಕಿ ೫,೬ ಜನರಿಗೆ ಮತ್ತೊಂದಿಷ್ಟು ಜವಾಬ್ದಾರಿ ಹಂಚಿಕೆ ಮಾಡಲಾಗಿರುತ್ತದೆ. ಇವರಿಷ್ಟು ಮಂದಿ ಆ ಪುಟದ ಮತದಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷದ ಚಟುವಟಿಕೆಗಳು, ಸರಕಾರದ ಅಭಿವೃದ್ಧಿ ಕೆಲಸಗಳ ಮಾಹಿತಿ ಒದಗಿಸುತ್ತಿರಬೇಕು. ಹೀಗೆ ತಾವು ಮಾಡಿದ ಕೆಲಸವನ್ನು ತಮ್ಮ ಮೇಲಿನವರಿಗೆ ಪ್ರತಿದಿನವೂ ವರದಿ ಕೊಡಬೇಕು.

ಇದೇ ಮಾದರಿಯ ತಂಡಗಳನ್ನು ಬೂತ್, ಹೋಬಳಿ, ತಾಲೂಕು ಮಟ್ಟದಲ್ಲೂ ರಚನೆ ಮಾಡಿದ್ದು, ವಾಟ್ಸಪ್ ಗ್ರೂಪ್‌ಗಳನ್ನೂ ಮಾಡಿಕೊಳ್ಳಬೇಕಿದೆ. ಜಿಲ್ಲೆ, ರಾಜ್ಯ ಹಾಗೂ ಕೇಂದ್ರದಿಂದ ಪಕ್ಷದ ಪ್ರತಿನಿಧಿಗಳು ಈ ತಂಡಗಳ ಮೇಲೆ ನಿಗಾ ಇಟ್ಟಿರುತ್ತಾರೆ. ಈ ರೀತಿ ನಿಗಾ ಇಟ್ಟಿರುವವರು ತಮಗೆ ಬಂದಿರುವ ವರದಿಗಳ ’ಕ್ರಾಸ್ ಚೆಕ್’ ಕೂಡ ಮಾಡುವುದರಿಂದ ಸರಿಯಾದ ಫೀಲ್ಡ್ ವರ್ಕ್ ಮಾಹಿತಿಗಳನ್ನೇ ಮೇಲಿನವರಿಗೆ ಕಳುಹಿಸಬೇಕಾಗಿರುತ್ತದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ಸ್ಥಳೀಯ ಮಟ್ಟದ ಬಿಜೆಪಿ ನಾಯಕರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಸರಕಾರಗಳು ರೂಪಿಸಿರುವ, ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ತಾವು ಯಾರಿಗೆ ಈ ದಿನ ಈ ರೀತಿಯ ಮಾಹಿತಿ ನೀಡಿದ್ದೇವೆ ಎನ್ನುವ ವಿವರವನ್ನು ಅವರ ಮೊಬೈಲ್ ನಂಬರ್ ಸಹಿತ ಮೇಲಿನವರಿಗೆ ಕಳುಹಿಸಬೇಕು. ಪ್ರಧಾನಮಂತ್ರಿ ಮನ್ ಕಿ ಬಾತ್ ತಮ್ಮೂರಿನಲ್ಲಿ ಎಷ್ಟು ಜನರಿಗೆ ಕೇಳಿದಿದ್ದೀರಿ ಎಂಬ ಬಗ್ಗೆಯೂ ಫೋಟೋ ಸಹಿತ ಮಾಹಿತಿ ಕಳಿಸಬೇಕು.

ಈ ವಿಚಾರದಲ್ಲಿ ಕಾಂಗ್ರೆಸ್ ಕೂಡ ಈಗ ಕಡಿಮೆಯೇನೂ ಇಲ್ಲ. ಪಕ್ಷದ ಬ್ಲಾಕ್ ಅಧ್ಯಕ್ಷರು ಸೇರಿದಂತೆ ವಿವಿಧ ಮುಂಚೂಣಿ ಘಟಕದ ಮುಖಂಡರಿಗೆ ಪ್ರತಿದಿನವೂ ವಿವಿಧ ಟಾಸ್ಕ್‌ಗಳನ್ನು ಕೊಡಲಾಗುತ್ತಿದೆ. ಪಕ್ಷದ ವತಿಯಿಂದ ನಡೆಯುವ ಪ್ರತಿಭಟನೆ, ಸಮಾವೇಶಗಳಿಗೆ ಹೆಚ್ಚು ಜನ ಸೇರಿಸುವುದು, ಮಾಜಿಕ ಜಾಲತಾಣಗಳಲ್ಲಿ ಅಂತಹ ಕಾರ್ಯಕ್ರಮಗಳ ನೇರ ಪ್ರಸಾರ ಮಾಡುವುದು.. ಹೀಗೆ ಬಗೆ ಬಗೆಯ ಕೆಲಸಗಳನ್ನು ಮಾಡಬೇಕು ನಂತರ ಅದರ ವಿವರ ಮೇಲಿನವರಿಗೆ ಕಳಿಸಬೇಕು. ಜಿಲ್ಲಾ ಮಟ್ಟದಲ್ಲಿ ಮತ್ತು ಬೆಂಗಳೂರಿನಲ್ಲಿ ವಿಧಾಸಭಾ ಕ್ಷೇತ್ರಕ್ಕೆ ಒಂದರಂತೆ ವಾರ್ ರೂಮ್‌ಗಳನ್ನು ಆರಂಭಿಸಲಾಗಿತ್ತು. ಪಕ್ಷದ ನಾಯಕರ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುತ್ತಿದೆ.

ಬದಲಾದ ಕಾಲಮಾನಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳೂ ತಮ್ಮ ಕಾರ್ಯತಂತ್ರಗಳನ್ನು ಬದಲಾಯಿಸಿಕೊಳ್ಳುತ್ತಿವೆ. ಮೊದಲೆಲ್ಲಾ ಚುನಾವಣೆ ಘೋಷಣೆ ಆದ ನಂತರ ಪ್ರಣಾಳಿಕೆ ರೂಪಿಸಿ ಮತದಾರ ಬಳಿ ತೆರಳಿ ಮತ ಯಾಚನೆ ಮಾಡಿದ್ದರೆ ಸಾಕಾಗಿತ್ತು. ಆದರೆ ಈಗ ವಿದ್ಯಾವಂತ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಪಕ್ಷವೊಂದರ ಪರ ಅವರ ಒಲವು ಗಳಿಸಬೇಕಾದರೆ ಹಲವು ರೀತಿಯ ಸಂಗತಿಗಳು ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣಗಳ ಪ್ರಭಾವವೂ ಇದರಲ್ಲಿ ದೊಡ್ಡ ಪಾಲು ಪಡೆಯುತ್ತದೆ. ಹಾಗಾಗಿಯೇ ರಾಜಕೀಯ ಪಕ್ಷಗಳು ಈಗ ಕಾರ್ಪೋರೇಟ್ ಸಂಸ್ಥೆಗಳ ಮಾದರಿಯಲ್ಲಿ ಕಾರ್ಯಾಚರಿಸುವ ಅನಿವಾರ್ಯತೆಯಲ್ಲಿದೆ.

ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದ ತನಕವೂ ನಮಗೆ ಬಿಡುವು ಇಲ್ಲದ ರೀತಿಯಲ್ಲಿ ಟಾಸ್ಕ್‌ಗಳನ್ನು ಕೊಡಲಾಗುತ್ತಿತ್ತು. ಈಗ ಸ್ವಲ್ಪ ಕಡಿಮೆ ಆಗಿದೆ. ಚುನಾವಣೆ ಘೋಷಣೆ ಆದ ನಂತರ ಹೆಚ್ಚಾಗಬಹುದು. ನಮ್ಮನ್ನು ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ಮಟ್ಟದಿಂದ ಗಮನಿಸುವುದರಿಂದ ಎಲ್ಲೂ ಸುಳ್ಳು ಮಾಹಿತಿ ಕೊಡಲು ಸಾಧ್ಯವೇ ಆಗುವುದಿಲ್ಲ.

ಕೆ.ಜಿ. ಮನು, ತಾಲೂಕು ಬಿಜೆಪಿ ವಕ್ತಾರ, ಸೋಮವಾರಪೇಟೆ

ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ನಂತರ ಪ್ರಯೋಗಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಪ್ರತಿಯೊಂದು ಚಟುವಟಿಕೆಗಳನ್ನೂ ಕಾರ್ಪೊರೇಟ್ ಸಂಸ್ಥೆಗಳ ಮಾದರಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಈಗ ಚುನಾವಣೆ ಸಮಯದಲ್ಲಿ ನಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು, ನಮ್ಮ ಕಾರ್ಯಚಟುವಟಕಗಳ
ಬಗ್ಗೆ ಪ್ರತಿ ದಿನವೂ ವರದಿ ಕೊಡಬೇಕಾಗುತ್ತದೆ.
ವಿ.ಪಿ. ಶಶಿಧರ್, ಅಧ್ಯಕ್ಷ, ಕುಶಾಲನಗರ ಬ್ಲಾಕ್ ಕಾಂಗ್ರೆಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net