

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ನಲ್ಲಿ ತರುಣ ಮೊರಬ ಪ್ರಶಸ್ತಿ ಪಡೆದಿದ್ದಾರೆ.
ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪುಣೆಯ ವಸೀಂ ಶೇಖ್ ಜತೆಗೆ ಸೆಣಸಾಡಿದ ತರುಣ ಮೊರಬ ಎರಡು ನೇರ ಸೆಟ್ಗಳಲ್ಲಿ 24-26, 14-21 ಅಂಕಗಳ ಅಂತರದಿಂದ ಜಯಗಳಿಸಿದರು.
ಪುರುಷರ ಡಬಲ್ಸ್ನಲ್ಲಿ ಬೆಂಗಳೂರಿನ ಸಹಸ್ರ ಹಾಗೂ ಆದರ್ಶ ಜೋಡಿಯು ಪುಣೆಯ ವಸೀಂ ಹಾಗೂ ಖಾನ್ ಜೋಡಿಯನ್ನು ಸೋಲಿಸಿ ಡಬಲ್ಸ್ ಪ್ರಶಸ್ತಿ ಹಾಗೂ 20 ಸಾವಿರ ರೂ. ನಗದು ಬಹುಮಾನ ಪಡೆದರು. 45ವರ್ಷಕ್ಕಿಂತ ಕಿರಿಯರ ಪುರುಷರ ಡಬಲ್ಸ್ನಲ್ಲಿ ಬೆಂಗಳೂರಿನ ಅಮಲ್ ದೇವ್ ಹಾಗೂ ಕಿರಣ ಜೋಡಿ ಧಾರವಾಡದ ಪ್ರಭುರಾಜ ಹಾಗೂ ಬಳ್ಳಾರಿಯ ಕೃಷ್ಣ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಜಯಿಸಿದರೆ, 75 ವರ್ಷಕ್ಕಿಂತ ಹಿರಿಯ ಪುರುಷರ ಜಂಬಲ್ ಡಬಲ್ಸ್ನಲ್ಲಿ ಬೆಂಗಳೂರಿನ ನವೀನ ಹಾಗೂ ಉಮೇಶ ಜೋಡಿಯು ಮೈಸೂರಿನ ಮಧುಸೂಧನ ಹಾಗೂ ದರ್ಶಶ ಜೋಡಿಯನ್ನು ಪರಾಭವಗೊಳಿಸಿತು.
ಇದಕ್ಕೂ ಪೂರ್ವದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪಂದ್ಯಾವಳಿಗೆ ಚಾಲನೆ ನೀಡಿದರು. ಅಂತರಾಷ್ಟ್ರೀಯ ಕ್ರೀಡಾಪಟು ಅಭಿಷೇಕ ಯಲಿಗಾರ, ಅನಿತಾ ಶಾನಭಾಗ, ರೋಹಿತ್ ಪಾಟೀಲ, ರಾಜು ಕೆ.ಎಂ., ರವಿ ಶಿವಯ್ಯನಮಠ, ಗೋಪಾಲಕೃಷ್ಣ, ಪ್ರಕಾಶ ಹೊಂಡೆದ, ಇತರರು ಉಪಸ್ಥಿತರಿದ್ದರು.