

ರಮೇಶ ಝಳಕನ್ನವರ ತಾರಿಹಾಳ
ಮಳೆಯಿಂದ ಸೂರು ಬಿದ್ದು ವರ್ಷಗಳೇ ಕಳೆದರೂ ಪರಿಹಾರ ಮಾತ್ರ ಕೈಸೇರಿಲ್ಲ. ಇದರಿಂದ ಮನೆ ಪಕ್ಕದ ಮತ್ತೋಬ್ಬರ ಸಣ್ಣ ತಗಡಿನ ಶೆಡ್ ಇವರಿಗೆ ಆಸರೆಯಾಗಿದೆ. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಅಲೆದಾಡಿ ಈ ಕುಟುಂಬ ಬೇಸತ್ತು ಹೋಗಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ದೇಮವ್ವ ಬಾಳು ತಳವಾರ ಕುಟುಂಬ ಇದೀಗ ಸೂರು ಇಲ್ಲದೇ ನೋವು ಅನುಭವಿಸುತ್ತಿದೆ. ಕಳೆದ ವರ್ಷದ ಮಳೆಯಲ್ಲಿ ಇವರ ಮನೆಯ ಒಂದು ಭಾಗ ಕುಸಿದು ಬಿದ್ದಿತ್ತು. ಬಾಡಿಗೆ ಮನೆ ಮಾಡಿ ಬೇರೆ ಕಡೆ ಹೋಗ ಬೇಕು ಎಂದರೆ ಆರ್ಥಿಕ ತೊಂದರೆ. ಹೀಗಾಗಿ ಬಿದ್ದ ಮನೆಯಲ್ಲೆ ಇಷ್ಟು ದಿನ ವಾಸ ಮಾಡುತ್ತಿದ್ದರು. ಆದರೆ, ಈಚೆಗೆ ಸುರಿದ ಮಳೆಯಿಂದ ಇದ್ದ ಅರ್ಧ ಮನೆಯೂ ಬಿದ್ದು ಹೋಗಿ ಈ ಕುಟುಂಬ ಬೀದಿ ಪಾಲಾಗಿದೆ.
ಕೂಲಿಯೇ ಆಧಾರ:ದೇಮವ್ವ ಪತಿ ತೀರಿಕೊಂಡು ಹಲವು ವರ್ಷಗಳೇ ಆಗಿದೆ. ಮನೆಗೆ ಗಂಡು ದಿಕ್ಕು ಇಲ್ಲ. ಇದೇ ಕಾರಣಕ್ಕೆ ಮದುವೆ ಮಾಡಿಕೊಟ್ಟ ಇಬ್ಬರು ಹೆಣ್ಣು ಮಕ್ಕಳು ತಮ್ಮ ಗಂಡಂದಿರರೊಂದಿಗೆ ಇವರ ಮನೆಯಲ್ಲೇ ವಾಸವಾಗಿದ್ದಾರೆ. ಹೀಗಾಗಿ ಸಣ್ಣ ಶೆಡ್‌ನಲ್ಲಿ ವಾಸ ಮಾಡುವುದು ದುಸ್ತರವಾಗಿದೆ. ಇನ್ನೂ ದೇಮವ್ವ ನರೇಗಾ ಕೂಲಿ ಕೆಲಸ ಮಾಡಿ ಮನೆ ನಿಭಾಯಿಸುತ್ತಿದ್ದಾರೆ. ಇತ್ತ ಅಳಿಯಂದಿರು ಕಟ್ಟಡ ಕೆಲಸಕ್ಕೆ ಹೋಗುತ್ತಿದ್ದಾರೆ. ತೀವ್ರ ಆರ್ಥಿಕ ತೊಂದರೆಯಿಂದ ಮನೆ ನಿರ್ಮಾಣ ಮಾಡುವುದು ಕಷ್ಟ ಸಾಧ್ಯವಾಗಿದೆ.
ಅಡ ಮಳಿ ಬಂದ್ರ ಓಣ್ಯಾನು ನೀರೆಲ್ಲ ಮನಿ ಒಳಗ ಬರ‌್ತಾವ್ರಿ, ಮನಿ ಎಲ್ಲ ಸೋರತೈತ್ರಿ, ಸಣ್ಣ ಮಕ್ಕಳ ಕೂಡ ಹೆಂಗ್ ಇರೋದ್ರಿ ಎಂದು ದೇಮವ್ವ ತಳವಾರ ಕಣ್ಣೀರು ಹಾಕುತ್ತಾರೆ. ಮನೆ ಬಿದ್ದ ಮೇಲೆ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ ಪ್ರತಿಭಾ ದೇಸಾಯಿ, ತಲಾಠಿ ರವಿ ಕುಲಕರ್ಣಿ, ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದಷ್ಟು ಬೇಗ ಹಣ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಇರುವ ಶೆಡ್‌ಗೆ ಸರಿಯಾದ ಬೆಳಕಿನ ವ್ಯವಸ್ಥೆ, ಶೌಚಾಲಯ ಇಲ್ಲದೆ ಹೆಣ್ಣು ಮಕ್ಕಳು ಇರುವ ಕುಟುಂಬ ಸಮಾಜದ ಕಣ್ಣಿಗೆ ಮುಜಗುರ ಪಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ದೇಮವ್ವ ಕುಟುಂಬಕ್ಕೆ ಆಸರೆ ಕಲ್ಪಿಸಿಕೊಡಬೇಕಾಗಿದೆ.
ರಾಜೀವ ಗಾಂಧಿ ಹೌಸಿಂಗ್ ಬೋರ್ಡ್‌ನಲ್ಲಿ ಈಗಾಗಲೇ ಮನೆ ಮಂಜೂರಾಗಿದೆ. ಆದರೆ ಹಣ ಜಮೆ ಮಾಡಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ರವಿ ಕುಲಕರ್ಣಿ ಗ್ರಾಪಂ ತಾರೀಹಾಳ ತಲಾಠಿ, ಮಳೆಗೆ ಮನೆ ಬಿದ್ದಿದ್ದರ ಬಗ್ಗೆ ಪರಿಶೀಲಿಸಲಾಗಿದೆ. ಆದಷ್ಟೂ ಬೇಗ ಲಾನುಭವಿಗಳಿಗೆ ಮನೆ ಕಟ್ಟಿ ಅನುಕೂಲ ಮಾಡಿಕೊಡಲಾಗುವುದು. ನಾಮದೇವ ಜೋಗನ್ನವರ, ಗ್ರಾಪಂ ಅಧ್ಯಕ್ಷ ತಾರೀಹಾಳ