ನಾವಿಕನಿಲ್ಲದ ದೋಣಿಯಂತಾದ ತರೀಕೆರೆ ಪುರಸಭೆ

TKE STORY 1 (PURASABHE)
Published on

ತರೀಕೆರೆ: ಮೇಟಿ ಇಲ್ಲದ ಮನೆ, ನಾವಿಕನಿಲ್ಲದ ದೋಣಿಯಂತಾಗಿದೆ. ಮುಖ್ಯಾಧಿಕಾರಿ ಇಲ್ಲದ ತರೀಕೆರೆ ಪುರಸಭೆ ಸ್ಥಿತಿ. ಸ್ವಚ್ಛತೆ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಪೂರೈಸಬೇಕಾದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಜತೆಗೆ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಇಷ್ಟೆಲ್ಲಾ ಸಮಸ್ಯೆಗಳಿಗೆ ಹಿಂದಿದ್ದ ಮುಖ್ಯಾಧಿಕಾರಿ ಪುರಸಭೆಯಿಂದ ಬಿಡುಗಡೆಗೊಂಡು ಜಿಲ್ಲಾ ಪೌರಾಡಳಿತ ನಿರ್ದೇಶನಾಲಯದ ವ್ಯವಸ್ಥಾಪಕ ಹುದ್ದೆಗೆ ದಿಢೀರ್ ನಿಯೋಜನೆಗೊಂಡಿರುವುದೇ ಕಾರಣವಾಗಿದೆ. ಮುಖ್ಯಾಧಿಕಾರಿ ಹುದ್ದೆ ಖಾಲಿ ಇರುವ ಹಿನ್ನೆಲೆಯಲ್ಲಿ ಪುರಸಭೆ ವ್ಯವಸ್ಥಾಪಕ ಟಿ.ಒ.ವಿಜಯಕುಮಾರ್‌ಗೆ ಪ್ರಭಾರಿಯಾಗಿ ನೇಮಕಮಾಡಿದ್ದರೂ ವಯೋ ನಿವೃತ್ತಿ ಅಂಚಿನಲ್ಲಿರುವ ಅವರಿಂದ ಸಮರ್ಥ ಆಡಳಿತ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ, ಸೌಮ್ಯ ಸ್ವಭಾವದ ನಡುವಳಿಕೆಯಿಂದ ಪೌರ ಕಾರ್ಮಿಕರು, ಸಿಬ್ಬಂದಿಗಳ ಮೇಲೆ ಹಿಡಿತ ಕಳೆದುಕೊಳ್ಳುವಂತಾಗಿದೆ.

ಇದರಿಂದ ಪುರಸಭೆಯ ಎಲ್ಲ ಶಾಖೆಗಳು ನಿಷ್ಕ್ರಿಯವಾಗಿ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆಯಾಗಿದೆ. ಅಲ್ಲದೇ ಸಮಸ್ಯೆ ಇತ್ಯರ್ಥ, ಕಡತ ವಿಲೇವಾರಿ, ವಿವಿಧ ಕೆಲಸ ಕಾರ್ಯಗಳಿಗೆ ಪುರಸಭೆ ಕಚೇರಿಗೆ ಅಲೆಯುವಂತಾಗಿದೆ. ಕಂದಾಯ, ಆರೋಗ್ಯ, ತಾಂತ್ರಿಕ ಇನ್ನಿತರ ಶಾಖೆ ಅಕಾರಿ, ಸಿಬ್ಬಂದಿಗಳಿಂದ ಸಮಸ್ಯೆಗೆ ಪರಿಹಾರ ಇರಲಿ ಪೂರಕ ಸ್ಪಂದನೆಯೇ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಭಾವಿಸಿ ಮರಳಿ ಮನೆಗೆ ತೆರಳುವಂತಾಗಿದೆ.

ಚುನಾಯಿತ ಜನಪ್ರತಿನಿಧಿಗಳ ಮಾತಿಗೂ ಕಿಮ್ಮತ್ತು ಸಿಗದಂತಾಗಿರುವ ಕಾರ್ಯಾಲಯದಲ್ಲಿ ಪುರಸಭೆ ನಿಧಿ ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಹೀಗೆ ಒಂದೆರಡಲ್ಲ ಹತ್ತಾರು ಕಾರಣಕ್ಕೆ ಲಯ ತಪ್ಪುತ್ತಿರುವ ಪುರಸಭೆ ಆಡಳಿತ ಸುಧಾರಣೆಗೆ ಸಮರ್ಥ ಮುಖ್ಯಾಕಾರಿಯೊಬ್ಬರ ಅನಿವಾರ್ಯತೆ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆ ಮೇಲಾಕಾರಿಗಳು ಆಸಕ್ತಿ ವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net