ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳದ ಗುರಿ

Published on

ಬಳ್ಳಾರಿ : ಜಿಲ್ಲೆಯ ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಒಂಬತ್ತು ಸಾವಿರ ಹಸುಗಳನ್ನು ವಿತರಿಸಲು ಮುಂದಾಗಿದ್ದು ಇದರೊಂದಿಗೆ ಸಹಕಾರಿ ಸಂಘಗಳೊಂದಿಗೆ ರಾಬಕೊವಿ ಒಕ್ಕೂಟಕ್ಕೆ ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ.

ಕೆಎಂಆರ್‌ಸಿ ಅನುದಾನದಿಂದ ಜಿಲ್ಲೆಯ ಸಂಡೂರಿಗೆ ಐದು ಸಾವಿರ ಹಾಗೂ ಬಳ್ಳಾರಿ ತಾಲೂಕಿಗೆ ನಾಲ್ಕು ಸಾವಿರ ಹಸುಗಳನ್ನು ನೀಡಲು ಮುಂದಾಗಿರುವ ಕರ್ನಾಟಕ ಗಣಿ ಪರಿಸರ ಪುನರ್ ಸ್ಥಾಪನೆ ನಿಗಮ(ಕೆಎಂಆರ್‌ಸಿ)ವು ಇದಕ್ಕಾಗಿ 45.52 ಕೋಟಿ ರೂ. ಅನುದಾನಕ್ಕೆ ಕಳೆದ ತಿಂಗಳು ಏಪ್ರೀಲ್ ತಿಂಗಳಲ್ಲಿ ಮಂಜೂರಾತಿ ನೀಡಿದೆ. ಇದರಿಂದ ಗಣಿಬಾಧಿತ ಪ್ರದೇಶಗಳಲ್ಲಿನ ರೈತ ಕುಟುಂಬಗಳಿಗೆ ತಲಾ ಎರಡು ಹಸು ಅಥವಾ ಎಮ್ಮೆಗಳ ಖರೀದಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಅಲ್ಲದೆ, ಇದರಿಂದ ವಿಭಜಿತ ಜಿಲ್ಲೆಯಲ್ಲೇ ಪ್ರತಿದಿನ ಸುಮಾರು 70 ರಿಂದ 80 ಸಾವಿರ ಲೀ. ಹಾಲು ಸಂಗ್ರಹವಾಗಲಿದೆ. ಅಲ್ಲದೆ, ಒಕ್ಕೂಟ ಉತ್ಪಾದಿಸುವ ನಂದಿನಿ ಹಾಲು ಸೇರಿ ಇತರೆ ಉತ್ಪನ್ನಗಳ ಮಾರಾಟ ಪ್ರಮಾಣವೂ ಬಳ್ಳಾರಿಯಲ್ಲೇ ಜಾಸ್ತಿಯಿದೆ. ಪ್ರತಿದಿನ ನಗರ ಪದೇಶವೊಂದರಲ್ಲಿ 77 ಸಾವಿರ ಲೀ. ನಂದಿನಿ ಹಾಲು ಮಾರಾಟವಾಗಲಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದರು.

ಜಿಪಂ ಸಿಇಒ ನೇತೃತ್ವದಲ್ಲಿ ಪಶುಸಂಗೋಪನಾ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಗಣಿಬಾಧಿತ ಎಂದು ಗುರುತಿಸಿದ ಪ್ರದೇಶದಿಂದ ಹದಿನೈದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ತಾಲೂಕಿನ ಹದಿನೈದು ಹಾಗೂ ಸಂಡೂರು ತಾಲೂಕಿನ 83 ಗ್ರಾಮಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಕೆಎಂಆರ್‌ಸಿ ಆದೇಶ ಪತ್ರದಲ್ಲಿ ತಿಳಿಸಿದೆ.

ರಾಬಕೊವಿ ಹಾಲು ಒಕ್ಕೂಟದಲ್ಲಿ ಈ ಮೊದಲು ಜಿಲ್ಲೆಯ 170 ಹಾಲು ಉತ್ಪಾದನಾ ಸಹಕಾರಿ ಸಂಘಗಳು ಇದ್ದವು. ಅವುಗಳನ್ನು ಕೇವಲ 68ಕ್ಕೆ ಇಳಿಸಲಾಗಿತ್ತು. ವಿಭಜಿತ ಜಿಲ್ಲೆಯ ರೈತರಿಂದ ಸಂಗ್ರಹಿಸಿಕೊಂಡ ಹಾಲಿಗೆ ಸಮಯಕ್ಕೆ ಪೇಮೆಂಟ್ ನೀಡದಿರುವುದು. ಹಾಲಿನಲ್ಲಿ ನೀರಿನ ಅಂಶ ಜಾಸ್ತಿಯಿದೆ ಎಂದು ತಿರಸ್ಕರಿಸುವುದು. ಪ್ರತಿ ಲೀ. ಹಾಲಿಗೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಹಣ ನೀಡುವಲ್ಲಿ ವಿಳಂಬ ಮಾಡುವುದು ಸೇರಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ವಿಭಜಿತ ಬಳ್ಳಾರಿ ಜಿಲ್ಲೆಯ ರೈತರು ಹಾಲನ್ನು ಒಕ್ಕೂಟಕ್ಕೆ ತರದಂತೆ ಖಾಸಗಿ ಡೇರಿಗಳಿಗೆ ನೀಡುವಂತೆ ಮತ್ತು ನೇರವಾಗಿ ನಗರ ಪ್ರದೇಶಗಳ್ಲಲಿ ಗ್ರಾಹಕರಿಗೆ ಮಾರಿಕೊಳ್ಳುವಂತೆ ಮಾಡಲಾಗಿದೆ ಎಂಬ ಆರೋಪ ಬಲವಾಗಿದೆ. ಇತ್ತೀಚಿಗೆ ಸಂಡೂರು ತಾಲೂಕಿನಲ್ಲಿ ಪುನಃ ಮೂವತಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಆರಂಭಿಸುವ ಮೂಲಕ ಇದೀಗ 98ಕ್ಕೆ ಏರಿಕೆಯಾಗಿದೆ.

ಮೆಗಾಡೇರಿ ನಿರ್ಮಾಣಕ್ಕೆ ಅನುಕೂಲ : ಕಳೆದ ತಿಂಗಳು ಹಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ (ರಾಬಕೊವಿ) ಹಾಲು ಉತ್ಪಾದನಾ ಒಕ್ಕೂಟದ ಉದ್ದೇಶಿತ ಮೆಗಾಡೇರಿ ನಿರ್ಮಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಪೈಪೋಟಿ ನಡೆಸುತ್ತಿವೆ. ಅಲ್ಲದೆ, ಎರಡು ಜಿಲ್ಲೆಗಳ ರೈತರಿಂದ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿತದ ನೆಪವೊಡ್ಡಿ ಜಿಲ್ಲೆಯಲ್ಲಿದ್ದ ಹಾಲು ಉತ್ಪಾದನಾ ಸಹಕಾರಿ ಸಂಘಗಳನ್ನು ಕ್ರಮೇಣ ಕಡಿತಗೊಳಿಸುತ್ತಾ ಬಂದಿದೆ. ಪರಿಣಾಮ ವಿಜಯನಗರ ಜಿಲ್ಲೆಯಲ್ಲಿ ಒಂದಷ್ಟು ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕರು ಒಕ್ಕೂಟದಲ್ಲಿ ಇರುವುದರಿಂದ ಆಡಳಿತ ಮಂಡಳಿ ಸಭೆಯಲ್ಲಿ ತಮಗೆ ಬೇಕಾದಂತಹ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಅವಿಭಜಿತ ಬಳ್ಳಾರಿ ಜಿಲ್ಲೆ ವಿಭಜನೆಯಾದ ಬಳಿಕ ಒಂದೂಂದೇ ಕೈ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಕೆಎಂಆರ್‌ಸಿಯಿಂದ ಹಸು, ಎಮ್ಮೆ ವಿತರಣೆ ಯೋಜನೆಯಿಂದ ರಾಬಕೊವಿ ಮೆಗಾಡೇರಿಯನ್ನು ಜಿಲ್ಲೆಯಲ್ಲಿ ನಿರ್ಮಿಸಲು ಇದು ಸಹಕಾರಿಯಾಗಲಿದೆ.

ಕೋಟ್... ಕೆಲ ವರ್ಷಗಳ ಬಳಿಕ ಇಲಾಖೆಗೆ ಕೆಎಂಆರ್‌ಸಿಯಿಂದ ಅನುದಾನ ಬಿಡುಗಡೆಯಾಗಿದ್ದು ಸಂತಸದ ವಿಷಯವಾಗಿದೆ. ಮೇ 8(ಗುರುವಾರ)ದಂದು ಜಿಪಂ ಸಿಇಒ ನೇತೃತ್ವದಲ್ಲಿ ಸಭೆ ನಡೆಯಲಿದೆ. ಯಾವ ಯಾವ ಮಾನದಂಡ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲು ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ನಿರ್ಧಾರಿಸಲಾಗುವುದು.

- ಡಾ.ಹನುಮಂತ ನಾಯ್ಕ ಕಾರ್ ಬಾರಿ, ಉಪ ನಿರ್ದೇಶಕ, ಪಶುಸಂಗಪನಾ ಇಲಾಖೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net