ಮಹಿಳಾ ಸಬಲೀಕರಣ ಅನುಷ್ಠಾನಕದಲ್ಲಿ ಗುರಿ ಸಾಧಿಸಲಾಗಿಲ್ಲ

ಮಹಿಳಾ ಸಬಲೀಕರಣ ಅನುಷ್ಠಾನಕದಲ್ಲಿ ಗುರಿ ಸಾಧಿಸಲಾಗಿಲ್ಲ
Published on

ದೇಶದಲ್ಲಿ ಮಹಿಳಾ ಸಬಲೀಕರಣದ ಅನುಷ್ಠಾನದಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ನಟರಾಜ ಮಹಿಳಾ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಟರಾಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜುಗಳತ್ತ ಅಂಬೇಡ್ಕರ್ ಚಿಂತನೆಗಳ ವಿಸ್ತರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣ ಕೇವಲ ಕಾನೂನಿಗಷ್ಟೇ ಸೀಮಿತವಾಗಿದೆ. ವಿದೇಶಗಳಲ್ಲಿ ಮಹಿಳೆಯರಿಗೆ ನೀಡಿರುವ ಪ್ರಾತಿನಿದ್ಯಕ್ಕೂ ಭಾರತದಲ್ಲಿ ನೀಡಿರುವ ಪ್ರಾತಿನಿದ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಮಾಜದಲ್ಲಿ ಮಹಿಳೆಯರಿಗೆ ಘನತೆಯ ಬದುಕು ಸಿಗಬೇಕು ಎಂಬ ಉದ್ದೇದಿಂದ ಅಂಬೇಡ್ಕರ್, ಮಹಿಳೆಯರ ಪರ ಕಾನೂನು ರೂಪಿಸಲು ಹಿಂದುಕೋಡ್ ಬಿಲ್ ಪ್ರಸ್ತಾಪಿಸಿದರು. ಆಗ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಅದಕ್ಕೂ ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತೀವ್ರವಾಗಿ ಖಂಡಿಸಿದ್ದರು ಎಂದು ಹೇಳಿದರು.

ಸಮಾಜ ನಮ್ಮ ಕೈಯಲ್ಲಿದೆ ಎಂದು ಹೇಳುತ್ತಿರುವವರಿಗೆ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಕೊಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಇಂದಿಗೂ ಮಹಿಳೆಗೆ ಆಸ್ತಿಯಲ್ಲಿ ಸಮಾನ ಪಾಲು ನೀಡುತ್ತಿಲ್ಲ. ನಾವು, ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಬೇಕಿದೆ. ಅಂತವರ ಆಲೋಚನೆಗಳು ಅನುಷ್ಠಾವಾಗುವಂತೆ ಜಾಗೃತಗೊಳ್ಳಬೇಕಿದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನರೇಂದ್ರಕುಮಾರ್ ಮಾತನಾಡಿ, ವಿಶ್ವಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಮಹಿಳೆಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಇಂದಿಗೂ ನಿರ್ಲಕ್ಷ್ಯ ಮಾಡಲಾಗಿದೆ ಎಂದರು.

ಶ್ರೀ ಚಿದಾನಂದ ಸ್ವಾಮೀಜಿ, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವನಂಜಪ್ಪ, ಪ್ರೊ.ಜೆ.ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net