

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಮುಂದಾಗಿರುವ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆ ಜುಲೈ ಅಂತ್ಯಕ್ಕೆ 6.5 ಲಕ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಶೇ. 80 ಗುರಿ ಸಾಧಿಸಿದ್ದು, ಮಾಸಾಂತ್ಯಕ್ಕೆ ಗುರಿ ಮುಟ್ಟುವ ಭರವಸೆ ವ್ಯಕ್ತಪಡಿಸಿದೆ.
ಹೌದು! ರಾಜ್ಯ ಸರ್ಕಾರ ಹಾಗೂ ಗ್ರಾಮಾಂತರ ಜಿಪಂ ಯೋಜನೆಯಲ್ಲಿ ಹಸಿರೀಕರಣಕ್ಕೆ ಹೆಜ್ಜೆ ಇಟ್ಟಿರುವ ಇಲಾಖೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯಶಸ್ಸಿನ ಹಾದಿಯತ್ತ ಮುಂದಡಿ ಇಟ್ಟಿದೆ.
ಪ್ರಸಕ್ತ ಸಾಲಿನಲ್ಲಿ ಕರೊನಾತಂಕದ ನಡುವೆಯೇ ಮೇನಲ್ಲಿ ಸರಳವಾಗಿ ಜಿಲ್ಲಾದ್ಯಂತ ಆಚರಿಸಿದ ಪರಿಸರ ದಿನಾಚರಣೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 6.5 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು.
ಅಂದೇ ಜಿಲ್ಲೆಯ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಂಕೇತಿಕವಾಗಿ ಸಾವಿರಾರು ಸಸಿ ನೆಡುವ ಕಾರ್ಯಕ್ಕೆ ಇಲಾಖೆ ಮುಂದಾಗಿತ್ತು. ಅಂದಿನಿಂದ ನಿರಂತರವಾಗಿ ವಿವಿಧ ಜಾತಿ ಸಸಿ ನೆಡುವ ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದು, ತಿಂಗಳಾಂತ್ಯಕ್ಕೆ ನಿಗದಿತ ಗುರಿ ತಲುಪುವ ಭರವಸೆ ವ್ಯಕ್ತಪಡಿಸಿದೆ.
ನರೆಗಾ ಯೋಜನೆ ವರದಾನ: ಜಿಲ್ಲೆಯಲ್ಲಿ ಹಸರೀಕರಣ ಕಾರ್ಯದಲ್ಲಿ ನರೇಗಾ ಯೋಜನೆ ವರದಾನವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಯೋಜನೆಯಲ್ಲಿ ಜಿಲ್ಲಾದ್ಯಂತ ಕಾಮಗಾರಿ ಆರಂಭವಾಗಿದ್ದು, ಇದರಲ್ಲಿ ಸಸಿ ನೆಡುವ ಕಾರ್ಯಕ್ಕೆ ಹೆಚ್ಚು ಒಲವು ನೀಡಲಾಗಿದೆ ಎನ್ನಲಾಗಿದೆ.
ಜುಲೈ ಮಳೆಗಾಲಕ್ಕೆ ಸೂಕ್ತವಾಗಿದ್ದು, ಈ ತಿಂಗಳಲ್ಲಿ ಸಸಿ ನೆಟ್ಟು ಪ್ರಾಥಮಿಕ ಪೋಷಣೆ ಮಾಡಿದರೆ ಉತ್ತಮ ಫಲ ದೊರಕಲಿದೆ ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿ ಸಸಿ ನೆಡುವ ಗುರಿ ಹೊಂದಿದ್ದು, ಹಸಿರೀಕರಣದ ಆಶಯ ನೆರವೇರಿಸಲು ಮುಂದಾಗಿದೆ.
150 ಕಿಮೀ ವ್ಯಾಪ್ತಿಯಲ್ಲಿ ಸಸಿ ನಾಟಿ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸುಮಾರು 150 ಕಿಮೀ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ಇಲಾಖೆಯಿಂದ 44.350 ಸಾವಿರ ಸಸಿ ನೆಡಲಾಗಿದೆ. ಹಸಿರು ಕರ್ನಾಟಕ ಹಾಗೂ ಮತ್ತಿತರ ಯೋಜನೆಯಲ್ಲಿ ರೈತರಿಗೆ ರಿಯಾಯಿತಿ ದರ ಹಾಗೂ ಉಚಿತವಾಗಿ 1.63 ಲಕ್ಷ ಸಸಿ ನೀಡಲಾಗುತ್ತಿದೆ. ನರೆಗಾ ಯೋಜನೆ, ಶಾಲಾವನ ನಿರ್ಮಾಣ ಸೇರಿ ಗ್ರಾಪಂಮಟ್ಟದಲ್ಲಿ 4.88 ಲಕ್ಷ ಸಸಿ ನೆಡುವ ಕಾರ್ಯಕ್ರಮ ಇದಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಅರಣ್ಯ ಇಲಾಖೆ ಬೆಂಬಲ: ಪರಿಸರ ರಕ್ಷಣೆ ಹಾಗೂ ಅರಣ್ಯ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಪ್ರಾದೇಶಿಕ ಅರಣ್ಯ ಇಲಾಖೆಯೂ ಮುಂದಾಗಿದ್ದು, ಅರಣ್ಯ ಇಲಾಖೆ ವಾರ್ಷಿಕ ಅಭಿವೃದ್ಧಿ ಯೋಜನೆ ಹಾಗೂ ಭವಿಷ್ಯದ ಅರಣ್ಯ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮ ಜಾರಿಯಲ್ಲಿದೆ. ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಜಾರಿಯಾಗಿದ್ದು, ನಿಗದಿತ ಗುರಿ ಸಾಧನೆಯಾದರೆ ಜಿಲ್ಲೆಯಲ್ಲಿ ಮತ್ತಷ್ಟು ಹಸಿರು ಕಾಣಬಹುದು.
ಜಿಲ್ಲೆಯಲ್ಲಿ 6 ಲಕ್ಷ ಸಸಿ ನೆಡುವ ಗುರಿಯೊಂದಿಗೆ ಪರಿಸರ ದಿನಾಚರಣೆಯಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅದರನ್ವಯ ಈಗಾಗಲೇ ಭಾಗಶಃ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮಾಸಾಂತ್ಯಕ್ಕೆ ಗುರಿ ಮುಟ್ಟಲಾಗುವುದು. ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಬೆಂ.ಗ್ರಾಮಾಂತರ