ಸಂಚಾರ ಕೇಸ್ ಪೊಲೀಸರಿಗೆ ಟಾರ್ಗೆಟ್!: ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ನಿಗಾ

Traffic Police
Published on

ಮಂಗಳೂರು: ನಗರ ಕಮಿಷನರೆಟ್ ವ್ಯಾಪ್ತಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕ, ಮಾಲೀಕರ ಮೇಲೆ ಪೊಲೀಸರು ನಿಗಾ ಇಟ್ಟು ಪ್ರಕರಣ ದಾಖಲಿಸಲಿದ್ದಾರೆ.

ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ನಿಗದಿತ ಪ್ರಕರಣ ದಾಖಲಿಸುವಂತೆ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಸಂಚಾರ ನಿಯಮ ಪಾಲಿಸಿಕೊಂಡು ಸಂಚರಿಸದಿದ್ದರೆ ದುಬಾರಿ ದಂಡ ಪಾವತಿಸುವುದು ನಿಶ್ಚಿತ.

ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿರುವ 15 ಪೊಲೀಸ್ ಠಾಣೆಗಳು ಪ್ರತಿದಿನ ತಲಾ 100 ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು. ಪಿಎಸ್‌ಐ ಹಾಗೂ ಎಎಸ್‌ಐ ತಲಾ 30 ಪ್ರಕರಣ ದಾಖಲಿಸಬೇಕು. ಸಂಚಾರ ಪೊಲೀಸ್ ಠಾಣೆಗಳು ತಲಾ 120 ಪ್ರಕರಣ, ಹೆದ್ದಾರಿ ಗಸ್ತು ಹಾಗೂ ಇಂಟರ್‌ಸೆಪ್ಟರ್ ವಾಹನಗಳು ಕಡ್ಡಾಯವಾಗಿ ತಲಾ 50 ಪ್ರಕರಣಗಳನ್ನು ದಾಖಲಿಸಿ, ಪ್ರತಿ ದಿನ ರಾತ್ರಿ 8 ಗಂಟೆಯ ಒಳಗಾಗಿ ಜಿಲ್ಲಾ ನಿಯಂತ್ರಣ ಕೊಠಡಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸ್ ಆಯುಕ್ತರ ವ್ಯಾಪ್ತಿಯ ಠಾಣಾ ವ್ಯಾಪ್ತಿಗಳಲ್ಲೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಪೊಲೀಸರು ನಿಗಾ ಇಡಲಿದ್ದಾರೆ. ಪ್ರತಿ ನಿಯಮ ಉಲ್ಲಂಘನೆಗೂ ದಂಡದ ಮೊತ್ತ ದುಬಾರಿಯಾಗಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವುದು ಅವಶ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net