

ಹುಬ್ಬಳ್ಳಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ 2024-25ರ ಮುಂಗಡ ಪತ್ರ ನರೇಂದ್ರ ಮೋದಿಯವರ ವಿಕಸಿತ ಭಾರತ ಗುರಿಯನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಇಟ್ಟ ಹೆಜ್ಜೆಯಾಗಿದೆ ಮತ್ತು ದೂರಗಾಮಿಯೂ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿ್ರುಸಿದ್ದಾರೆ.
ಬಂಡವಾಳ ವೆಚ್ಚವನ್ನು 11 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದ್ದು, ಅದರ ಬಹುಭಾಗ ಮೂಲಭೂತ ಸೌಕರ್ಯಗಳ ನಿರ್ವಣಕ್ಕೆ ವ್ಯಯ ಮಾಡುವ ಉದ್ದೇಶ ಹಾಗೂ ತನ್ಮೂಲಕ ಆತ್ಮನಿರ್ಭರ ಭಾರತ ಹಾಗೂ ವಿಕಸಿತ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವತ್ತ ನಿಗಾವಹಿಸಿರುವುದು ಸ್ಪಷ್ಟವಾಗಿದೆ. 2024-25 ಸಾಲಿನ ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ. 5.1 ಕ್ಕೆ ನಿಗದಿಗೊಳಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ.
11.11 ಲಕ್ಷ ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಂಚಿಕೆ ಮಾಡಿರುವುದು ಒಂದು ಐತಿಹಾಸಿಕ ಬೆಳೆವಣಿಗೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಇನಾಫ್ರಾಸ್ಟ್ರಕ್ಚರ್ ಸೆಕ್ಟರ್ಗೆ ಹಿಂದೆ ಯಾವ ಸರ್ಕಾರಗಳೂ ನೀಡಿರಲಿಲ್ಲ. ರಸ್ತೆ, ರೈಲು ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಈ ಮೂಲಕ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದು ಮಹತ್ತರವಾದ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದ್ದಾರೆ.
26 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲು ಯೋಜನೆಗಳ ಆರಂಭದಿಂದ ಕರ್ನಾಟಕ, ಆಂಧ್ರಪ್ರದೇಶ ರೈಲ್ವೆ ಯೋಜನೆಗಳಿಗೆ ವಿಶೇಷ ಸ್ಥಾನ ಮಾನ ನೀಡಲಾಗಿದೆ ಎಂದಿದ್ದಾರೆ.
ರೈತರ ಎಲ್ಲ ಪ್ರಮುಖ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೊಷಿಸಿ, ಭರವಸೆಯನ್ನು ಈಡೇರಿಸಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯು ಮುಂದಿನ 5 ವರ್ಷಗಳವರೆಗೆ 80 ಕೋಟಿ ಜನರಿಗೆ ಪ್ರಯೋಜನ ನೀಡುತ್ತದೆ. ಇದೊಂದು ಸ್ವಾಗತಾರ್ಹ ಕ್ರಮ ಎಂದು ಸಚಿವ ಜೋಶಿ ಬಣ್ಣಿಸಿದ್ದಾರೆ. ಒಟ್ಟಾರೆ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ಒಳಗೊಳ್ಳುವಿಕೆಯ ಬಜೆಟ್ ಇದಾಗಿದೆ ಎಂದಿದ್ದಾರೆ.