ತಾರಾಪುರ ಪುನರ್ವಸತಿ ಕೇಂದ್ರದ ಮನೆಗಳ ವಿದ್ಯುತ್ ಸಂಪರ್ಕ ಕಡಿತ

Tarapur, Rehabilitation Centre, Tehsildar, Alamela,
ಆಲಮೇಲ ತಾಲೂಕಿನ ತಾರಾಪುರ ಪುನರ್ವಸತಿ ಕೇಂದ್ರಕ್ಕೆ ತಹಸೀಲ್ದಾರ್ ಕೆ.ವಿಜಯಕುಮಾರ ಭೇಟಿ ನೀಡಿ ಸಮಸ್ಯೆ ಕುರಿತು ಚರ್ಚಿಸಿದರು. ಮಡಿವಾಳಪ್ಪ ಬಿರಾದಾರ, ಬಸವರಾಜ ಮಣ್ಣೂರ ಇತರರಿದ್ದರು.
Published on

ಆಲಮೇಲ: ತಾಲೂಕಿನ ತಾರಾಪುರ ಪುನರ್ವಸತಿ ಕೇಂದ್ರದಲ್ಲಿಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ತಮ್ಮ ಮನೆಗಳಿಗೆ ಮೀಟರ್ ಇಲ್ಲದೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು.

ಕಳೆದ ಶುಕ್ರವಾರ ಹೆಸ್ಕಾಂ ಇಲಾಖೆಯವರು ಪುನರ್ವಸತಿ ಕೇಂದ್ರದ ಎಲ್ಲ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕೂಡಲೇ ನಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರಿಗೆ ವಿನಂತಿಸಿದರು.

ಶಾಸಕರು ಹೆಸ್ಕಾಂ ಅಧಿಕಾರಿಗಳ ಜೊತೆ ವಿದ್ಯುತ್ ಕಡಿತಗೊಳಿಸಿರುವ ಕುರಿತು ವಿಚಾರಿಸಿದಾಗ, ಕಳೆದ ಎರಡು ವರ್ಷಗಳಿಂದ ಎಲ್ಲ ಮನೆಗಳಿಗೆ ಮೀಟರ್ ಇಲ್ಲದೆ ವಿದ್ಯುತ್ ಬಳಸುತ್ತಿರುವ ವಿಚಾರ ಅರಿತ ಶಾಸಕರು, ಮೀಟರ್ ಅಳವಡಿಸಿಕೊಳ್ಳಲು ಒಂದು ವಾರ ಕಾಲಾವಕಾಶ ಕೊಡಿ. ವಾರದ ಒಳಗಾಗಿ ಮೀಟರ್ ಪಡೆದುಕೊಳ್ಳುತ್ತಾರೆ. ಅಲ್ಲಿಯವರೆಗೆ ವಿದ್ಯುತ್ ಕಡಿತಗೊಳಿಸಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಕೆ.ವಿಜಯಕುಮಾರ ತಾರಾಪುರ ಪುನರ್ವಸತಿ ಕೇಂದ್ರಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಗ್ರಾಮಸ್ತರು ತಮ್ಮ ಮನೆಗಳಿಗೆ ಅಧಿಕೃತವಾಗಿ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಇದರಲ್ಲಿ ಕೆಲವರು ಸೂಕ್ತ ದಾಖಲಾತಿಗಳು ಇಲ್ಲದೆ ಮೀಟರ್ ಅಳವಡಿಸಿಕೊಳ್ಳಲು ಆಗುತ್ತಿಲ್ಲವೆಂದು ಹೇಳಿದರು. ಇದಕ್ಕೆ ಪತ್ರಿಕ್ರಿಯಿಸಿದ ತಹಸೀಲ್ದಾರ್, ನೀವು ಸದ್ಯ ಕೇವಲ ನಿಮ್ಮ ಆಧಾರ್ ಕಾರ್ಡ್ ಮಾತ್ರ ಕೊಡಿ ಸಾಕು, ನಿಮಗೆ ಮೀಟರ್ ಅಳವಡಿಸಲಾಗುವುದು ಎಂದರು.

ಇದಕ್ಕೆ ಗ್ರಾಮಸ್ಥರು ಎರಡು ದಿನದಲ್ಲಿ ಎಲ್ಲರ ಆಧಾರ್ ಕಾರ್ಡ್ ಕೊಡುವುದಾಗಿ ಒಪ್ಪಿಕೊಂಡರು. ಗ್ರಾಮ ಆಡಳಿತ ಅಧಿಕಾರಿ ಮಡಿವಾಳಪ್ಪ ಬಿರಾದಾರ, ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಮಣ್ಣೂರ, ಗ್ರಾಮದ ಹಿರಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net