ಗುರುಶಾಂತರಾಜ ಶ್ರೀ ಶಿಕ್ಷಣ ಪ್ರೇಮಿ

dj sirigere veeragase
Published on

ಸಿರಿಗೆರೆ: ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಅವರು 1938ರಲ್ಲೇ ದಾವಣಗೆರೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಶಿಕ್ಷಣ ಪ್ರೇಮಿ ಎಂದು ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತರಳಬಾಳು ಬೃಹನ್ಮಠದಲ್ಲಿ ಅಣ್ಣನ ಬಳಗದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಗಳ 86ನೇ ಶ್ರದ್ಧಾಂಜಲಿ ಹಾಗೂ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೂಲತಃ ತೂಲಹಳ್ಳಿಯವರಾದ ಗುರುಶಾಂತರಾಜ ದೇಶಿಕೇಂದ್ರ ಶ್ರೀಗಳು, ತ್ಯಾಗದ ಮೂಲಕ ಸಮಾಜಕ್ಕೆ ಅಪರೂಪ ಕೊಡುಗೆ ನೀಡಿದ್ದಾರೆ. ಆದರೆ, ಮಠದ ಶಿಷ್ಯರಿಂದಲೇ ಒಳ ಸಂಚಿಗೆ ಲಿಂಗೈಕ್ಯರಾದರು ಎಂದರು.

1946ರಲ್ಲಿ ಲಿಂ. ಶಿವಕುಮಾರ ಶ್ರೀಗಳು ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು. ಇಂದು ನಮ್ಮ ಮಠದಿಂದ ನಾಡಿನಾದ್ಯಂತ 250ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಸ್ಥಾಪನೆಗೊಂಡಿದ್ದು, ಇದರಲ್ಲಿ 50 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಪೌರಾಣಿಕವಾಗಿ ಸಾಕಷ್ಟು ಕಥಾನಕಗಳಿವೆ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಜತೆಗೆ ಜೀವನಾದರ್ಶವನ್ನು ತೋರಿಸುವ ಪುರಾಣಗಳ ಕಥೆಗಳನ್ನು ಓದಬೇಕು. ಜತೆಗೆ ಜ್ಞಾನ ಸಂಪಾದನೆ ನಿರಂತರವಾಗಿರಬೇಕು ಎಂದು ತಿಳಿಸಿದರು.

ವೀರಗಾಸೆಯು ವೀರಾವೇಷದ ಹೋರಾಟದ ಕಲೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಮಠದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಮರುಳಸಿದ್ಧನ ಜೀವನ ಸಂಬಂಧಿಸಿದ ಪ್ರಸಂಗಗಳನ್ನು ಕಲಾವಿದರು ವೀರಗಾಸೆಯಲ್ಲಿ ಅಭಿನಯಿಸಬೇಕು ಎಂದು ಹೇಳಿದರು.

ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಲೆಯನ್ನು ಆಸ್ವಾದಿಸುವ ಪ್ರಜೆಗಳಾಗದೆ ಅವುಗಳನ್ನು ಉಳಿಸಿ ಬೆಳೆಸುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಮಾಲೇನಹಳ್ಳಿ ಬಸಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿವಿಧೆಡೆಯಿಂದ 11 ವೀರಗಾಸೆ ತಂಡದವರು ಭಾಗವಹಿಸಿದ್ದರು.

ವೀರಗಾಸೆಯು ವೀರತ್ವ, ಶೌರ್ಯವನ್ನು ಮುಖದಲ್ಲಿ ತುಂಬಿಕೊಂಡು ಪ್ರದರ್ಶಿಸುವ ಸಾಂಪ್ರದಾಯಿಕ ಗಂಡು ಕಲೆಯಾಗಿದೆ. ವೀರಗಾಸೆ, ಭಜನೆ, ಸೋಬಾನೆ ಇವೆಲ್ಲವೂ ಜನಪದ ಸಂಸ್ಕೃತಿಯ ಬೇರುಗಳು. ಜನಪದ ಸಾಹಿತ್ಯವು ಜನಜೀವನದ ಬೆಳಕು ಹಾಗೂ ಕನ್ನಡದ ಬೇರು. ಇದು ಸಾವಿಲ್ಲದ ಸಾಹಿತ್ಯ. ಹೊಸೂರು ಪುಟ್ಟರಾಜು, ಸಾಹಿತಿ

ಹೊಸೂರು ಪುಟ್ಟರಾಜು, ಸಾಹಿತಿ

ವೀರಗಾಸೆ ಗಂಡು ಮೆಟ್ಟಿದ ಕಲೆ. ಶ್ರೀ ಮಠವು ಹಲವಾರು ವರ್ಷಗಳಿಂದ ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಜತೆಗೆ ಜನಪದ ಕಲೆಯನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಡಾ.ಹಾ.ಮ.ನಾಗಾರ್ಜುನ, ಪ್ರಾಧ್ಯಾಪಕ, ಸಹ್ಯಾದ್ರಿ ವಿಜ್ಞಾನ ಕಾಲೇಜ್, ಶಿವಮೊಗ್ಗ

ಡಾ.ಹಾ.ಮ.ನಾಗಾರ್ಜುನ, ಪ್ರಾಧ್ಯಾಪಕ, ಸಹ್ಯಾದ್ರಿ ವಿಜ್ಞಾನ ಕಾಲೇಜ್, ಶಿವಮೊಗ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net